ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ ಶಿಕ್ಷಕರು ಹಾಗೂ ಉಪನ್ಯಾಸಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕೆಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷಗಳಲ್ಲಿ 18 ಸಾವಿರ ಹುದ್ದೆಗಳನ್ನು ತುಂಬಿಕೊಳ್ಳಲು ಆರ್ಥಿಕ ಇಲಾಖೆಯಿಂದ ಇಲಾಖೆ ಅನುಮತಿ ಪಡೆದಿತ್ತು. ಆದ್ರೆ ಸರಿಯಾದ ಮಾರ್ಗಸೂಚಿ ಮಾಡದೆ ಹುದ್ದೆಗಳ ನೇಮಕಾತಿ ಆಗುತ್ತಿಲ್ಲ. ಅಂಕ ಮಾದರಿಯಲ್ಲಿ ಶಿಕ್ಷಣ ಇಲಾಖೆ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ. ಇದರ ವೈಫಲ್ಯಕ್ಕೆ ಸಚಿವ ಸುರೇಶ್ ಕುಮಾರ್ ಅವರೇ ಕಾರಣ ಎಂದು ಆರೋಪಿಸಿದರು.
ನಿಯಮಗಳ ರಚನೆ ಬದಲಾವಣೆ ಮಾಡಿ ಹುದ್ದೆ ತುಂಬುವ ಕೆಲಸವನ್ನು ಸಚಿವರು ಮಾಡಬೇಕು. ಕೂಡಲೇ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು. 10 ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಸಿದ್ದು, ಕೇವಲ 2,900 ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿದ್ದು, ಪದವೀಧರ ಶಿಕ್ಷಕರು ಅವಕಾಶ ವಂಚಿತರಾಗಿದ್ದಾರೆ. ಪ್ರವೇಶ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಶ್ರೇಣಿಯ ಅನುಗುಣವಾಗಿ ನೇಮಕಾತಿ ಮಾಡುವ ಬದಲು ಶೇ.50 ರಷ್ಟು ಅಂಕಗಳನ್ನು ಕಡ್ಡಾಯಗೊಳಿಸಲಾಗಿದೆ. ಇಂತಹ ನಿಯಮ ಯುಪಿಎಸ್ಸಿ, ಕೆಪಿಎಸ್ಸಿ ನಡೆಸುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಲ್ಲವೆಂದು ರಮೇಶ್ಬಾಬು ಹೇಳಿದರು.
ಪಿಯು ಕಾಲೇಜುಗಳಲ್ಲಿ 2015 ರಿಂದ ಖಾಲಿ ಹುದ್ದೆಗಳ ನೇಮಕಾತಿ ಆಗಿಲ್ಲ. ಸುಮಾರು 9 ಸಾವಿರ ಉಪನ್ಯಾಸಕರ ಹುದ್ದೆ ಪಿಯು ಕಾಲೇಜುಗಳಲ್ಲಿ ಖಾಲಿ ಇವೆ. ಕೂಡಲೇ ಖಾಲಿ ಇರುವ ಉಪನ್ಯಾಸಕರ ಹುದ್ದೆ ನೇಮಕ ಮಾಡಬೇಕು. ಪಿಯುಸಿ ಪರೀಕ್ಷೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಟ್ರಾಂಗ್ ರೂಂ ಮಾಡಲು ಇಲಾಖೆ ಹೊರಟಿದೆ. ಪರೀಕ್ಷಾ ಸಮಯದಲ್ಲಿ ಇಂತಹ ಗೊಂದಲ ಸೃಷ್ಟಿಸಬೇಬೇಡಿ. ಹಿಂದಿನ ವರ್ಷದಂತೆ ಪರೀಕ್ಷಾ ವ್ಯವಸ್ಥೆ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕಾಲ ಕಾಲಕ್ಕೆ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಅನುದಾನಿತ ಶಾಲಾ- ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಮತಿ ನೀಡದೆ ಇರುವುದರಿಂದ ಸುಮಾರು 60 ಸಾವಿರ ಹುದ್ದೆಗಳು ಖಾಲಿ ಇವೆ. ಈಗಾಗಲೇ ನೇಮಕಾತಿ ಪ್ರವೇಶ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಶ್ರೇಣಿ ಅನುಗುಣವಾಗಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದರು.
ರಾಜ್ಯ ಬಜೆಟ್ನಲ್ಲಿ 28 ಸಾವಿರ ಕೋಟಿ ರೂಪಾಯಿಯನ್ನು ಶಿಕ್ಷಣ ಇಲಾಖೆಗೆ ನೀಡಲಾಗುತ್ತಿದೆ. ಶಿಕ್ಷಣ ಇಲಾಖೆಯನ್ನು ಸಚಿವ ಸುರೇಶ್ ಕುಮಾರ್ ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ವರ್ಗಾವಣೆ ನೀತಿ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು 7 ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡುವ ಕುರಿತು ಗೊಂದಲ ಸೃಷ್ಟಿಸಿದ್ದಾರೆ. ಹಾಗೆಯೇ ವರ್ಗಾವಣೆ ನೀತಿಯ ಬಗ್ಗೆಯೂ ಗೊಂದಲ ಉಂಟಾಗಿದೆ ಎಂದು ಜೆಡಿಎಸ್ ವಕ್ತಾರ ದೂರಿದರು.