ಬೆಂಗಳೂರು: ನಗರದ ಹೊರ ವರ್ತುಲ ರಸ್ತೆಯಲ್ಲಿರುವ ಡಾ ರಾಜ್‍ಕುಮಾರ್ ಸಮಾಧಿ ಪ್ರದೇಶದ ಅಭಿವೃದ್ಧಿ ಕುರಿತ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿ ನೀಡಿದ್ದು, ಯೋಜನಾ ಅಂದಾಜು ವೆಚ್ಚ ಕುರಿತು ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಚಿತ್ರ ನಟ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ರಾಜ್‍ಕುಮಾರ್ ಕುಟುಂಬದ ಸದಸ್ಯರು ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ವರನಟ ಡಾ ರಾಜಕುಮಾರ್ ಸಮಾಧಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ ರಾಘವೇಂದ್ರ ರಾಜಕುಮಾರ್ ಅವರು ಸಿಎಂ ಜೊತೆ ಚರ್ಚೆ ನಡೆಸಿದರು. ಇದಕ್ಕೆ ಸಂಬಂಧಪಟ್ಟಂತೆ ರಾಜ್ ಕುಟುಂಬದಿಂದ ಸಿದ್ಧಪಡಿಸಲಾಗಿರುವ ಯೋಜನೆಯ ಪಿಪಿಟಿಯನ್ನು ಸಿಎಂ ಬೊಮ್ಮಾಯಿ ಅವರು ವೀಕ್ಷಣೆ ಮಾಡಿದರು.
ರಾಜ್‍ಕುಮಾರ್ ಸಮಾಧಿ ಅಭಿವೃದ್ಧಿ, ಪುನೀತ್ ರಾಜ್‍ಕುಮಾರ್ ಸಮಾಧಿ ಅಭಿವೃದ್ಧಿ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿ ಅಭಿವೃದ್ಧಿ ಅಗತ್ಯತೆ ಬಗ್ಗೆ ಸಿಎಂಗೆ ಮನವರಿಕೆ ಮಾಡಿಕೊಟ್ಟರು.
ಇದನ್ನೂ ಓದಿ: Exclusive: ಮಕ್ಕಳ ಮಾನಸಿಕ ಒತ್ತಡ ಮತ್ತು ಜಂಕ್ ಫುಡ್ ಸೇವನೆಗಿದೆ ನಂಟು
ರಾಜ್ ಕುಟುಂಬದಿಂದ ಸಿದ್ಧಪಡಿಸಿದ ಪಿಪಿಟಿ ವೀಕ್ಷಣೆ ಮಾಡಿದ ನಂತರ ಯೋಜನೆ ಅಂದಾಜು ಮೊತ್ತದ ವರದಿ ಸಿದ್ಧಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. ಯೋಜನೆಯ ರೂಪುರೇಷೆ ತಯಾರದ ಬಳಿಕ ಮತ್ತೊಂದು ಸುತ್ತಿನೆ ಸಭೆ ಮಾಡೋಣ ಎಂದು ರಾಜ್ ಕುಟುಂಬಕ್ಕೆ ಸಿಎಂ ಬೊಮ್ಮಾಯಿ ಭರವಸೆ ನೀಡಿ, ರಾಜ್ ಸಮಾಧಿ ಪ್ರದೇಶದ ಅಭಿವೃದ್ಧಿಗೆ ಸಕಾರಾತ್ಮಕ ಸ್ಪಂದನೆ ನೀಡಿದರು.