ಬೆಂಗಳೂರು: ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಕರಾವಳಿಯಲ್ಲಿ ಮುಂದಿನ ಐದು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 26ರಿಂದ ಜೂ 30ರವರೆಗೆ ಭಾರೀ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದಿದೆ.
ಮಲೆನಾಡು, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವರದಿ ಬಿಡುಗಡೆ ಮಾಡಲಿರುವ ಹವಾಮಾನ ಇಲಾಖೆ: ಕರ್ನಾಟಕದಲ್ಲಿ ಮುಂದಿನ ತಿಂಗಳು ಮಳೆ ಕೊರತೆ ಉಂಟಾಗಬಹುದಾ ಅಥವಾ ಇಲ್ಲವೋ ಎಂಬುದರ ಬಗ್ಗೆ ಮುಂದಿನ ನಾಲ್ಕೈದು ದಿನಗಳಲ್ಲಿ ಹವಾಮಾನ ಇಲಾಖೆ (ಐಎಂಡಿ) ವರದಿ ಬಿಡುಗಡೆ ಮಾಡಲಿದೆ.
ಪ್ರಸಕ್ತ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯಲಿದೆ ಎಂದು ಮೇ ಕೊನೆಯ ವಾರದಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಇಲಾಖೆ ತಿಳಿಸಿತ್ತು. ಜೂನ್ ತಿಂಗಳಿನಲ್ಲಿ ವಿಪರೀತವಾಗಿ ಮಳೆ ಕುಂಠಿತಗೊಂಡಿದೆ. ಜೂನ್ 1ರಿಂದ ಜೂನ್ 25ರ ವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 160 ಮಿ. ಮೀ ಮಳೆಯಾಗಬೇಕಿತ್ತು. ಆದರೆ, 63 ಮಿ ಮೀ ಬಿದ್ದಿದೆ. ಶೇ. 61ರಷ್ಟು ಮಳೆ ಕೊರತೆಯಾಗಿದೆ.
ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ: ಮಲೆನಾಡಲ್ಲಿ ಶೇ. 77, ಕರಾವಳಿಯಲ್ಲಿ ಶೇ. 66, ಉತ್ತರ ಕರ್ನಾಟಕದಲ್ಲಿ ಶೇ. 58 ಹಾಗೂ ದಕ್ಷಿಣ ಕರ್ನಾಟಕದಲ್ಲಿ ಶೇ.22 ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ರೈತಾಪಿ ವರ್ಗ ದಯನೀಯ ಸ್ಥಿತಿ ಎದುರಿಸುವಂತಾಗಿದೆ.
ಮಳೆಗಾಗಿ ವಿಚಿತ್ರ ಆಚರಣೆ: ಸ್ಮಶಾನದ ಶವಗಳಿಗೆ ನೀರುಣಿಸಿದ ಗ್ರಾಮಸ್ಥರು : ಇನ್ನೊಂದೆಡೆ ರಾಜ್ಯದಲ್ಲಿ ವಾಡಿಕೆಯಂತೆ ಆಗಬೇಕಾಗಿದ್ದ ಮುಂಗಾರು ಮಳೆ ಕೊಂಚ ವಿಳಂಬವಾಗಿದೆ. ಇದರಿಂದಾಗಿ ರಾಜ್ಯದ ಹಲವೆಡೆ ಮಳೆಗಾಗಿ ಪ್ರಾರ್ಥಿಸಿ ಕಪ್ಪೆ ಮದುವೆ, ಕತ್ತೆ ಮದುವೆ, ದೇವರಿಗೆ ನೀರುಣಿಸುವುದು ಸೇರಿದಂತೆ ವಿವಿಧ ರೀತಿಯ ಆಚರಣೆ ಮತ್ತು ಸಂಪ್ರದಾಯವನ್ನು ಈಗಲೂ ಗ್ರಾಮೀಣ ಪ್ರದೇಶದಲ್ಲಿ ನಡೆಸಿಕೊಂಡು ಬರಲಾಗುತ್ತಿದ್ದಾರೆ. ಆದರೆ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಜನರು ಸ್ಮಶಾನದಲ್ಲಿ ಹೂತಿಟ್ಟಿದ್ದ ಶವಗಳಿಗೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿರುವಂತಹ ವಿಚಿತ್ರವಾದ ಆಚರಣೆ ಇದೀಗ ಬೆಳಕಿಗೆ ಬಂದಿದೆ.
ಗ್ರಾಮಸ್ಥರು ಈ ಆಚರಣೆಯನ್ನು ಹಲವು ದಶಕಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೇ, ಟ್ಯಾಂಕರ್‌ನೊಂದಿಗೆ ಸ್ಮಶಾನಕ್ಕೆ ತೆರಳಿದ ಗ್ರಾಮಸ್ಥರು ಸಮಾಧಿಗಳನ್ನು ಅಗೆದು ಕೊಳವೆ ಮೂಲಕ ಶವಗಳಿಗೆ ನೀರುಣಿಸಿದ್ದಾರೆ. ಅಲ್ಲದೆ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಈ ಬಗ್ಗೆ ರೈತ ವಾಗೇಶ ಹಿರೇಮಠ ಅವರು ಮಾತನಾಡಿ, ಸ್ಮಶಾನದಲ್ಲಿ ಹೂತಿದ್ದ ಶವಗಳಿಗೆ ನೀರುಣಿಸಿದ 10 ದಿನಗಳೊಳಗೆ ಮಳೆಯಾಗುತ್ತದೆ ಎನ್ನುವಂತಹ ನಂಬಿಕೆ ನಮಗಿದೆ. ಕಳೆದ ವರ್ಷ ಕೂಡಾ ಮಳೆ ವಿಳಂಬವಾದಾಗ ಇದೇ ರೀತಿ ಶವಗಳಿಗೆ ಸಂತೃಪ್ತಿ ಪಡೆಸಿದ್ದೆವು. ಈಗ ಅದೇ ರೀತಿಯಾಗಿ ಮತ್ತೊಮ್ಮೆ ಪ್ರಯೋಗ ಮಾಡಲಾಗುತ್ತಿದೆ. ಈ ಬಾರಿಯೂ ಮಳೆ ಖಂಡಿತವಾಗಿ ಬರುತ್ತದೆ ಎಂಬ ನಂಬಿಕೆ ಇದೆ. ಇನ್ನು ಹತ್ತು ದಿನಗಳಲ್ಲಿ ಭಾರಿ ಮಳೆಯಾಗಿ, ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ: ಮಳೆಗಾಗಿ ವಿಚಿತ್ರ ಆಚರಣೆ: ಸ್ಮಶಾನದಲ್ಲಿ ಹೂತಿದ್ದ ಸಮಾಧಿ ಅಗೆದು, ಶವಗಳಿಗೆ ನೀರುಣಿಸಿದ ಗ್ರಾಮಸ್ಥರು!