ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್ ಪತ್ನಿ ಸಮೇತರಾಗಿ ಬಂದು ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆಯ ಮತಕೇಂದ್ರ 22 ರಲ್ಲಿ ಮತದಾನ ಮಾಡಿದರು.
ಸ್ವಲ್ಪ ಹೊತ್ತು ಕ್ಯೂನಲ್ಲೇ ನಿಂತು ಬಳಿಕ ತಮ್ಮ ಮತ ಚಲಾವಣೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನಾನೇ ಬಿಜೆಪಿ ಅಭ್ಯರ್ಥಿ ಎಂದು ಭಾವಿಸಿ ಇಂದು ಮತದಾನ ಮಾಡಿದ್ದೇನೆ. ಕಳೆದ 15 ದಿನಗಳಲ್ಲಿ ಏನೇನು ಹೇಳಬೇಕು ಏನೇನು ಕೇಳಬೇಕು ಎಲ್ಲವೂ ಕೇಳಿ ಬಿಟ್ಟಿದ್ದೇವೆ. ಇಂದು ಮತದಾರರಾದ ನಿಮ್ಮ ಸರದಿ. ಹಗಾಗಿ ದಯವಿಟ್ಟು ಮತಗಟ್ಟೆಗೆ ಬಂದು ಮತದಾನ ಮಾಡಿ. ಬೆಂಗಳೂರು, ಆರ್ಆರ್ ನಗರದ ಅಭಿವೃದ್ಧಿಗಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಸಂಜೆ ಆರು ಗಂಟೆಯೊಳಗೆ ಎಲ್ಲರೂ ಮತದಾನ ಮಾಡಲು ಬರುತ್ತಾರೆ ಎಂಬ ವಿಶ್ವಾಸ ಇದೆ. ಕೋವಿಡ್ ಹಿನ್ನೆಲೆ, ಚುನಾವಣಾ ಆಯೋಗ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮತದಾನ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.