ಬೆಂಗಳೂರು: ಪ್ಲಾಸ್ಟಿಕ್ ಬಳಕೆ ಮಾಡದಂತೆ ಬಿಎಂಟಿಸಿ ತನ್ನ ಪ್ರಯಾಣಿಕರಿಗೆ ಅರಿವು ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ. ಈ ನಿಟ್ಟಿನಲ್ಲಿ ಬಸ್‌ಗಳಲ್ಲಿರುವ ಎಲ್‌ಇಡಿ ಪರದೆ ಮೂಲಕ ಪ್ಲಾಸ್ಟಿಕ್ ತ್ಯಜಿಸಿ-ಪರಿಸರ ಉಳಿಸಿ ಅಂತ ಬಿಂಬಿಸುತ್ತಿದೆ. ಅಷ್ಟೇ ಅಲ್ಲದೇ ಟಿಟಿಎಂಸಿ ಹಾಗೂ ಬಸ್ಸು ನಿಲ್ದಾಣಗಳಲ್ಲೂ ಜಾಗೃತಿ ಮೂಡಿಸುವಂತೆ ತನ್ನ ಸಿಬ್ಬಂದಿಗೆ ತಿಳಿಸಿದೆ.
ಕೇಂದ್ರೀಯ ಕಾರ್ಯಾಗಾರ, ತರಬೇತಿ ಕೇಂದ್ರ ಹಾಗೂ ಕೇಂದ್ರ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ತಿಳಿಸಿದೆ. ಸಂಸ್ಥೆಯ ಘಟಕ ಮತ್ತು ಕೇಂದ್ರೀಯ ಕಾರ್ಯಾಗಾರಗಳ ದೈನಂದಿನ ಕಾರ್ಯಾಚರಣೆಯಿಂದ ಉತ್ಪತ್ತಿಯಾಗುವ ಘನ ತ್ಯಾಜ್ಯ ಮತ್ತು ಅಪಾಯಕಾರಿ ತ್ಯಾಜ್ಯದ ವಿಲೇವಾರಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿ ಹಾಗೂ ನ್ಯಾಯಾಲಯ ನಿರ್ದೇಶನದಂತೆ ವಿಲೇವಾರಿ ಮಾಡುತ್ತಿದೆ.
![bmtc announcement for quit plastic and save envirnment](https://etvbharatimages.akamaized.net/etvbharat/prod-images/4614085_thum.jpg)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರು (ಆರೋಗ್ಯ) ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬಾಗ್, ಭಿತ್ತಿಪತ್ರ, ಫ್ಲಕ್ಸ್, ತಟ್ಟೆ, ಲೋಟ, ಚಮಚ, ಪ್ಲಾಸ್ಟಿಕ್ ಹಾಳೆ ಸೇರಿದಂತೆ ಬಳಕೆಯನ್ನು ಸಂರ್ಪೂಣವಾಗಿ ನಿಷೇಧಿಸಲು ಸುತ್ತೋಲೆ ಹೊರಡಿಸಿದೆ.
ಹೀಗಾಗಿ ಬಿಎಂಟಿಸಿ ವ್ಯಾಪ್ತಿಗೆ ಬರುವ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಿ ಈ ಬಗ್ಗೆ ಸಿಬ್ಬಂದಿಯಲ್ಲಿ ಅರಿವು ಮೂಡಿಸಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ ಎಂಬ ಫಲಕ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.