ಬೆಂಗಳೂರು : ಅಡುಗೆ ಅನಿಲ, ಅಡುಗೆ ಎಣ್ಣೆ, ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯಿಂದ ಗೃಹಿಣಿಯರು ಹಾಗೂ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಈ ಜನ ವಿರೋಧಿ ನೀತಿ ಖಂಡಿಸಿ ನಾಳೆ ರಾಜ್ಯಾದ್ಯಂತ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟಿಸಲಾಗುವುದು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜಭವನ ಚಲೋ ನಡೆಸಿ ಸರ್ಕಾರದ ನೀತಿ ವಿರುದ್ಧ ರಾಜ್ಯಪಾಲರ ಮುಖಾಂತರ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗುವುದು ಎಂದರು. ಯುಪಿಎ ಸರ್ಕಾರದ ಅವಧಿಯಲ್ಲಿ ಸಣ್ಣಪುಟ್ಟ ಬೆಲೆ ಏರಿಕೆಗೂ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ ನಾಯಕಿಯರಾದ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಅವರು ಈಗ ಯಾಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿರುವ ಶೋಭಕ್ಕ, ತಾರಕ್ಕ, ಮಾಳವಿಕಾ ಅಕ್ಕ, ಶಶಿಕಲಾ ಜೊಲ್ಲೆ ಅವರಿಗೆ ಈ ಬೆಲೆ ಏರಿಕೆ ಕಾಣಿಸುತ್ತಿಲ್ಲವೇ? ಮಧ್ಯಮ ವರ್ಗದ ಹೆಣ್ಣುಮಕ್ಕಳ ಕಣ್ಣೀರ ಕೂಗು ನಿಮಗೆ ಕೇಳಿಸುತ್ತಿಲ್ಲವೇ? ಅಧಿಕಾರ ಸಿಕ್ಕ ಮೇಲೆ ನೈತಿಕತೆಯೇ ಕಳೆದುಹೋಗಿದೆಯಾ? ಕೋವಿಡ್ ಸಮಯದಲ್ಲಿ ಜನರು ಈ ಬೆಲೆ ಏರಿಕೆ ನಿಭಾಯಿಸಲು ಸಾಧ್ಯವಾ? ಜನರ ಕಷ್ಟ ನಿಮಗೆ ಕಾಣುತ್ತಿಲ್ಲವೇ?. ನಾನು ಮೋದಿ ಅವರ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ 56 ಇಂಚಿನ ಎದೆಯಲ್ಲಿ ಹೆಣ್ಣಿನ ಹೃದಯವಿಲ್ಲ. ಹೀಗಾಗಿ, ಬಿಜೆಪಿ ಮಹಿಳಾ ನಾಯಕಿಯರನ್ನು ಪ್ರಶ್ನೆ ಮಾಡುತ್ತಿದ್ದೇನೆ ಎಂದರು.
ಯುಪಿಎ ಅವಧಿಯಲ್ಲಿ ಅಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆಯಾಗುತ್ತಿತ್ತು. ಆದರೆ, ಈಗ ಒಂದು ಬಾರಿಗೆ 25ರಿಂದ 50 ರೂಪಾಯಿವರೆಗೂ ಅಡುಗೆ ಅನಿಲದ ಬೆಲೆ ಏರಿಕೆಯಾಗುತ್ತಿದೆ. ಏಷ್ಟೇ ಬೆಲೆ ಹೆಚ್ಚಿಸಿದರೂ ಜನ ತೆಗೆದುಕೊಳ್ಳುತ್ತಾರೆ. ಯಾರೂ ಪ್ರಶ್ನೆ ಮಾಡುವುದಿಲ್ಲ ಎಂಬ ಮನಸ್ಥಿತಿಗೆ ಬಿಜೆಪಿ ನಾಯಕರು ಬಂದಿದ್ದಾರೆ.
2014ರಲ್ಲಿ 410 ರೂಪಾಯಿ ಇದ್ದ ಅಡುಗೆ ಅನಿಲ, ಕಳೆದ 7 ವರ್ಷಗಳಲ್ಲಿ 27 ಬಾರಿ ಏರಿಕೆ ಕಂಡು ಇಂದು 880 ರೂಪಾಯಿ ಆಗಿದೆ. ಸದ್ಯದಲ್ಲೇ ಸಾವಿರದ ಗಡಿ ಮುಟ್ಟಿದರೆ ಆಶ್ಚರ್ಯವಿಲ್ಲ. ಕೇವಲ ಅಡುಗೆ ಅನಿಲ ಮಾತ್ರವಲ್ಲ, ದಿನಸಿ ಸಾಮಗ್ರಿ, ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗುತ್ತಿದೆ.
ಈ ಮಧ್ಯೆ ಬಿಜೆಪಿ ನಾಯಕರೊಬ್ಬರು ಈ ಬೆಲೆ ಏರಿಕೆಗೆ ತಾಲಿಬಾನ್ ಸರ್ಕಾರ ಕಾರಣ ಎಂಬ ಬಾಲಿಷ ಹೇಳಿಕೆ ನೀಡುತ್ತಾರೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ದೇಶವನ್ನು ಕಟ್ಟದಿದ್ದರೆ ಇಂದು ನಾವ್ಯಾರೂ ಹೀಗೆ ಕೂರಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಉಜ್ವಲ ಯೋಜನೆಯಲ್ಲಿ 8 ಕೋಟಿಗೂ ಹೆಚ್ಚು ಮಹಿಳೆಯರಿಗೆ ಉಚಿತ ಗ್ಯಾಸ್ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತೀರಾ. ಈ ಬೆಲೆ ಏರಿಕೆಯಿಂದ ಅವರಿಗೆ ಅನ್ಯಾಯವಾಗುತ್ತಿಲ್ಲವೇ? ಒಂದೂವರೆ ವರ್ಷದಿಂದ ಸಬ್ಸಿಡಿ ಸಿಗುತ್ತಿಲ್ಲ. ಅವೈಜ್ಞಾನಿಕ ತೆರಿಗೆ ಮೂಲಕ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ರಾಮಲಿಂಗಾ ರೆಡ್ಡಿ ಅವರ ಮಾರ್ಗದರ್ಶನದ ಮೇರೆಗೆ ಬುಧವಾರ ಇಡೀ ರಾಜ್ಯದೆಲ್ಲೆಡೆ ಏಕ ಕಾಲಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ಹೋರಾಟ ಮಾಡಲಿದೆ.
ನಾಳೆ ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾಗುತ್ತೇವೆ. ರಾಜ್ಯಪಾಲರು, ರಾಷ್ಟ್ರಪತಿಗಳು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರಾ? ಅಥವಾ ನಿದ್ರೆ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು. ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಹಾಗೂ ತಾಲೂಕು ಕೇಂದ್ರಗಳಲ್ಲಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಓದಿ: ಕೇರಳದಲ್ಲಿ ನಿಫಾ ವೈರಸ್ ಪತ್ತೆ : ಕರ್ನಾಟಕದಲ್ಲಿ ಕಟ್ಟೆಚ್ಚರವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ