ಬೆಂಗಳೂರು: ದೇಶದಲ್ಲಿ ಮಹಿಳೆಯರ ಭದ್ರತೆ ಹಾಗೂ ಯುವಕ ಯುವತಿಯರಿಗೆ ಉದ್ಯೋಗ ಭರವಸೆ ನೀಡಬೇಕು ಎಂದು ಆಗ್ರಹಿಸಿ ನಾವು ಇಂದು ರಂಗೋಲಿ ಬಿಡಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಸಿಎಎ ಹಾಗೂ ಎನ್ಆರ್ಸಿ ಕಾಯ್ದೆ ಖಂಡಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ರೂಪದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಯುವಕ-ಯುವತಿಯರಿಗೆ ಉದ್ಯೋಗ ಮಹಿಳೆಯರಿಗೆ ರಕ್ಷಣೆ ಬೇಕಿದೆ. ಎನ್ಆರ್ಸಿ ಮತ್ತು ಸಿಎಎ ನಮಗೆ ಬೇಡ ಬಲವಂತವಾಗಿ ಹೇರಲಾಗುತ್ತಿದೆ. ಸುಳ್ಳು ಹೇಳುವ ರಾಷ್ಟ್ರೀಯ ನಾಯಕರು, ಹೆಣ್ಣುಮಕ್ಕಳ ರಕ್ಷಣೆಗೆ ಗಮನ ಕೊಡುತ್ತಿಲ್ಲ. ಅತ್ಯಾಚಾರ-ಅನಾಚಾರ ದೌರ್ಜನ್ಯಕ್ಕೆ ಒಳಗಾಗಿ ಹೆಣ್ಣು ಮಕ್ಕಳ ಸಾವು ಇನ್ನೆಷ್ಟು ದಿನ ಮುಂದುವರಿಯಬೇಕು? ಇದನ್ನ ರಂಗೋಲಿ ಸ್ಪರ್ಧೆಯ ಮೂಲಕ ನಾವು ನಮಗೆ ರಕ್ಷಣೆ ಬೇಕು ಎಂದು ಹೇಳುತ್ತಿದ್ದೇವೆ. ರಕ್ಷಣೆ ಉದ್ಯೋಗ ಭದ್ರತೆ ನೀಡಿ ಎಂದು ಸರ್ಕಾರವನ್ನು ಎಚ್ಚರಿಸಲು ರಂಗೋಲಿ ಸ್ಪರ್ಧೆ ಆಯೋಜಿಸಿದ್ದೇವೆ ಎಂದು ವಿವರಿಸಿದರು.