ಬೆಂಗಳೂರು: ಮಹಿಳೆ ಮೇಲೆ ಸಚಿವ ಸೋಮಣ್ಣ ಹಲ್ಲೆ ನಡೆಸಿದ್ದಾರೆ. ಕೂಡಲೇ ಅವರ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಟಿಸಿದ ಮಹಿಳಾ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ಮೇಲೆ ಸೋಮಣ್ಣ ಹಲ್ಲೆ ವಿಚಾರ ಪುಷ್ಪಾ ಅಮರನಾಥ್ ಮಾಧ್ಯಮಗಳ ಜೊತೆ ಮಾತನಾಡಿ, ದೀಪಾವಳಿ ಹಬ್ಬದ ಆಚರಣೆ ಇದೆ. ಮಹಿಳೆಯರ ಹಬ್ಬ ಆಚರಣೆಗೂ ಬೆಲೆ ಇಲ್ಲ. ಸೋಮಣ್ಣನವರಿಂದ ಇಂತಹ ನಡವಳಿಕೆ ನಿರೀಕ್ಷಿಸಿರಲಿಲ್ಲ. ಇದು ಬಿಜೆಪಿ ನಡೆ. ಹೆಣ್ಣು ಸಮಾಜದಲ್ಲಿ ಮುಖ್ಯ ವೇದಿಕೆಗೆ ಬರುತ್ತಾರೆ ಎಂದಾಗ ಅವರನ್ನು ತುಳಿಯುವ ಪ್ರಯತ್ನ ಮಾಡುತ್ತೀರಿ. ಮಹಿಳೆಯರಿಗೆ ಸಮಾಜದಲ್ಲಿ ಎರಡನೇ ಸ್ಥಾನದಲ್ಲೇ ಇಟ್ಟು ಬಿಜೆಪಿಯವರು ನೋಡುತ್ತಾರೆ. ಮಹಿಳೆಯರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಾರೆ ಎಂದು ಆರೋಪಿಸಿದರು.
ಅವರೆಲ್ಲರೂ ರಾಮನ ಭಕ್ತರೇ? ಮೂರು ನಿಮಿಷಕ್ಕೆ 15 ಅತ್ಯಾಚಾರ ನಡೆಯುತ್ತಿದೆ. ದೇಶದಲ್ಲಿ ಅತ್ಯಾಚಾರ ತಡೆಯೋಕೆ ಆಗ್ತಿದ್ಯಾ? ನಾವಷ್ಟೇ ಅಲ್ಲ, ಶೋಭಕ್ಕ ಬೀದಿಗೆ ಬರಬೇಕು. ಶಶಿಕಲಾ ಜೊಲ್ಲೆ, ಮಾಳವೀಕ ಅಕ್ಕ ನೀವು ಹೊರಗೆ ಬನ್ನಿ. ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ. ನಿಮಗೆ ನಾಚಿಕೆ ಇದ್ಯಾ? ಮರ್ಯಾದೆ ಇದ್ಯಾ? ಈಗ ಯಾಕೆ ಬಾಯಿ ಮುಚ್ಚಿಕೊಂಡಿದ್ದೀರಾ? ಮೊನ್ನೆ ಲಿಂಬಾವಳಿ ಏನು ಮಾಡಿದರು. ಅವರ ಮೇಲೆ ಏನಾದರೂ ಕ್ರಮ ಜರುಗಿಸಿದ್ದಾರಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ ; ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ವಿ. ಸೋಮಣ್ಣ
ಮಹಿಳೆಯರ ಮೇಲೆ ಏನೇ ದೌರ್ಜನ್ಯ ಮಾಡಬಹುದಾ ? ನಿಮಗೆ ಮಾನ ಮರ್ಯಾದೆ ಇದ್ದರೆ ಸೋಮಣ್ಙನವರ ರಾಜೀನಾಮೆ ಪಡೆಯಿರಿ. ನಾವು ಮಹಿಳಾ ಆಯೋಗಕ್ಕೆ ದೂರು ಕೊಡುತ್ತೇವೆ. ಪೊಲೀಸ್ ಸಿಬ್ಬಂದಿ ಎದುರೇ ಕಪಾಳಕ್ಕೆ ಹೊಡೆದಿದ್ದಾರೆ. ಸುಮೊಟೊ ಅಡಿ ಅವರು ಕೇಸ್ ದಾಖಲಿಸಬೇಕಿತ್ತು ಎಂದರು.
ಯುವ ಕಾಂಗ್ರೆಸ್ ಬೆಂಬಲ : ಮಹಿಳಾ ಕಾಂಗ್ರೆಸ್ ಪ್ರತಿಭಟನೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಸಹ ಬೆಂಬಲ ವ್ಯಕ್ತಪಡಿಸಿದರು. ಬೆಳಗ್ಗೆ ಮಹಿಳಾ ಕಾಂಗ್ರೆಸ್ ಪ್ರತಿಭಟನೆಗೂ ಮುನ್ನ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ನಾಯಕ ಎಸ್ ಮನೋಹರ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರ ತಂಡ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಕಾಂಗ್ರೆಸ್ ಮುಖಂಡ ಮನೋಹರ್ ಮಾತನಾಡಿ, ಸಚಿವರು ಮನವಿಗೆ ಬಂದ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ದಲಿತ ಮಹಿಳೆ ಮೇಲೆ ಸಚಿವ ಸೋಮಣ್ಣ ಹಲ್ಲೆ ಮಾಡಿದ್ದಾರೆ. ಇದು ಮಹಿಳಾ ವಿರೋಧಿ ಬಿಜೆಪಿ ಸರ್ಕಾರ. ಸಿಎಂ ಕೂಡಲೇ ಸೋಮಣ್ಣ ಅವರನ್ನು ವಜಾಗೊಳಿಸಬೇಕು. ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ. ಸರ್ಕಾರ ದಲಿತ ವಿರೋಧಿ ಅನ್ನುವುದು ಸಾಬೀತಾಗಿದೆ ಎಂದರು.
ಇದನ್ನೂ ಓದಿ : ಮಹಿಳೆಗೆ ಕಪಾಳಮೋಕ್ಷ ಘಟನೆ.. ಸಚಿವ ಸೋಮಣ್ಣ ಕ್ಷಮೆಯಾಚನೆ