ಬೆಂಗಳೂರು: ರಾಜ್ಯದಲ್ಲಿ ನಿಧಾನವಾಗಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗುತ್ತಿದ್ದು, ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ರಾಜ್ಯಾದ್ಯಂತ ನೋಂದಣಿ ಹಾಗೂ ಮುಂದ್ರಾಂಕ ಕಚೇರಿಗಳನ್ನು ಪ್ರಾರಂಭಿಸಿದೆ. ಆರಂಭದಲ್ಲಿ ನೀರಸವಾಗಿದ್ದ ನೋಂದಣಿ ಪ್ರಕ್ರಿಯೆ ಇದೀಗ ಚುರುಕು ಪಡೆಯುತ್ತಿದೆ.
ಲಾಕ್‌ಡೌನ್ ಹಿನ್ನೆಲೆ ರಾಜ್ಯದ ತೆರಿಗೆ ಮೂಲಗಳೆಲ್ಲವೂ ಬಂದ್ ಆಗಿದ್ದವು. ಇದೀಗ ಸರ್ಕಾರ ತೆರಿಗೆ ಮೂಲಗಳನ್ನು ಒಂದೊಂದಾಗಿ ತೆರೆಯುತ್ತಿದೆ. ಈ ನಿಟ್ಟಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿ ಏಪ್ರಿಲ್ 24ರಿಂದ ರಾಜ್ಯದಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ತೆರೆಯಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಗಂಟೆಗೆ ಗರಿಷ್ಠ ಮೂರು ದಾಖಲೆಗಳನ್ನು ನೋಂದಣಿ ಮಾಡಲು ಸೂಚನೆ ನೀಡಲಾಗಿತ್ತು. ಜೊತೆಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರಲು ಸಾರ್ವಜನಿಕರಿಗೆ ಸಮಯವನ್ನೂ ನಿಗದಿಗೊಳಿಸಲಾಗುತ್ತದೆ. ಆ ಮೂಲಕ ಜನಸಂದಣಿಯಾಗದಂತೆ ನೋಡಿಕೊಳ್ಳಲಾಗುತ್ತದೆ.
ಮುಂದ್ರಾಂಕ ಮತ್ತು ನೋಂದಣಿ ಇಲಾಖೆ ಈ ಆರ್ಥಿಕ ವರ್ಷದಲ್ಲಿ ಸುಮಾರು 12,655 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಿದೆ. ಅದರಂತೆ ಪ್ರತಿ ದಿನ ಸುಮಾರು 40 ಕೋಟಿ ರೂ. ಸಂಗ್ರಹಿಸಬೇಕಾಗಿದೆ. ಪ್ರಾರಂಭದಲ್ಲಿ ಕೊಂಚ ನೀರಸವಾಗಿದ್ದ ನೋಂದಣಿ ಪ್ರಕ್ರಿಯೆ ಇದೀಗ ಚುರುಕು ಪಡೆಯುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಹೇಗಿದೆ ನೋಂದಣಿ ಪ್ರಕ್ರಿಯೆ?: ಮುದ್ರಾಂಕ ಮತ್ತು ನೋಂದಣಿ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ ಏ. 24ರಂದು ಮೊದಲ ದಿನ ರಾಜ್ಯದಾದ್ಯಂತ ಒಟ್ಟು 232 ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಪ್ರಾರಂಭಿಸಲಾಗಿತ್ತು. ಮೊದಲ ದಿನ ಕೇವಲ 40 ದಾಖಲಾತಿಗಳನ್ನು ಮಾತ್ರ ನೋಂದಣಿ ಮಾಡಲಾಗಿತ್ತು. ಇದರಲ್ಲಿ ಯಾವುದೇ ಆಸ್ತಿ ನೋಂದಣಿ ಇಲ್ಲ. ಮೊದಲ ದಿನ ರಾಜ್ಯಾದ್ಯಂತ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕದ ರೂಪದಲ್ಲಿ ಒಟ್ಟು 6.49 ಲಕ್ಷ ರೂ. ಆದಾಯ ಕ್ರೋಢೀಕರಿಸಲಾಗಿತ್ತು.
- ಏ. 27ರಂದು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಒಟ್ಟು 1.44 ಕೋಟಿ ರೂ. ಆದಾಯ ಸಂಗ್ರಹಿಸಲಾಗಿದೆ.
- ಏ. 28ರಂದು ಒಟ್ಟು 740 ಆಸ್ತಿ ದಾಖಲೆಗಳನ್ನು ನೋಂದಣಿ ಮಾಡಲಾಗಿದ್ದು, ಒಟ್ಟು 1.44 ಕೋಟಿ ರೂ. ಆದಾಯ ಸಂಗ್ರಹಿಸಲಾಗಿತ್ತು. ಏಪ್ರಿಲ್ 29ಕ್ಕೆ ಒಟ್ಟು 1243 ದಾಖಲೆಗಳನ್ನು ನೋಂದಣಿ ಮಾಡಲಾಗಿದ್ದು, ಒಟ್ಟು 3.92 ಕೋಟಿ ರೂ. ಆದಾಯ ಸಂಗ್ರಹ ಮಾಡಲಾಗಿದೆ.
- ಇನ್ನು ಏ. 30ರಂದು ರಾಜ್ಯಾದ್ಯಂತ ಒಟ್ಟು 1604 ಆಸ್ತಿ ದಾಖಲೆಗಳನ್ನು ನೋಂದಣಿ ಮಾಡಲಾಗಿತ್ತು. ಆ ಮೂಲಕ ಸುಮಾರು 7.41 ಕೋಟಿ ರೂ. ಆದಾಯ ಸಂಗ್ರಹಿಸಲಾಗಿದೆ.
- ಏಪ್ರಿಲ್ 30ರಂದು ಬೆಂಗಳೂರಿನ 41 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಒಟ್ಟು 211 ಆಸ್ತಿ ದಾಖಲೆಗಳನ್ನು ನೋಂದಣಿ ಮಾಡಲಾಗಿದೆ. ಆ ಮೂಲಕ ಒಟ್ಟು 4.14 ಕೋಟಿ ರೂ. ಆದಾಯ ಸಂಗ್ರಹಿಸಲಾಗಿದೆ.
- ಮೇ 2ರಂದು ರಾಜ್ಯದಲ್ಲಿ ಒಟ್ಟು 1438 ಆಸ್ತಿ ದಾಖಲೆಗಳನ್ನು ನೋಂದಣಿ ಮಾಡಲಾಗಿದ್ದು, ಒಟ್ಟು 3.90 ಕೋಟಿ ರೂ. ಆದಾಯ ಕ್ರೋಢೀಕರಿಸಲಾಗಿದೆ. ಅದೇ ಬೆಂಗಳೂರಿನ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಒಟ್ಟು 2.04 ಕೋಟಿ ರೂ. ಆದಾಯ ಸಂಗ್ರಹ ಮಾಡಲಾಗಿದೆ.