ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿದ್ದ ಪ್ರೊ. ಎಸ್. ಜಾಫೆಟ್ ಅಧಿಕಾರಾವಧಿ ಇಂದಿಗೆ ಮುಕ್ತಾಯವಾಗಲಿದೆ. ಕಳೆದ ನಾಲ್ಕು ವರ್ಷಗಳಿಂದ ಕುಲಪತಿಯಾಗಿದ್ದ ಎಸ್.ಜಾಫೆಟ್ ಅವರ ವಯಸ್ಸು 67 ಆಗುತ್ತಿರುವುದರಿಂದ, ನಿಯಮ ಪ್ರಕಾರ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ.
ಆದರೆ ಈ ಕುಲಪತಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಹೀಗಾಗಿ ಬೆಂಗಳೂರು ಸಿಟಿ ಯೂನಿವರ್ಸಿಟಿಯ ಚಾನ್ಸಲರ್ ಸಹ ಆಗಿರುವ ರಾಜ್ಯಪಾಲರು, ತಾತ್ಕಾಲಿಕವಾಗಿ ಈ ಸ್ಥಾನಕ್ಕೆ, ಅತ್ಯಂತ ಹಿರಿಯ, ಸಂವಹನ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ನರಸಿಂಹಮೂರ್ತಿ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಕೇಂದ್ರ ವಿವಿಗೆ ಬೇರೆ ಕುಲಪತಿಗಳ ನೇಮಕ ಆಗುವವರೆಗೆ, ನವೆಂಬರ್ 21ರಿಂದ ಮುಂದಿನ ವರ್ಷ ಫೆಬ್ರವರಿ 28ರವರೆಗೆ ಪ್ರೊ. ನರಸಿಂಹಮೂರ್ತಿ, ಬೆಂಗಳೂರು ಕೇಂದ್ರ ವಿವಿ ಉಪ ಕುಲಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಕುಲಪತಿಯಾದವರು ಅವರ ನಿವೃತ್ತಿಗೂ 6 ತಿಂಗಳ ಮುನ್ನ ಹಣಕಾಸಿಗೆ ಸಂಬಂಧಿಸಿದಂತೆ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಬಾರದು ಎಂಬ ನಿಯಮವಿದೆ. ಆದರೆ ಜಾಫೆಟ್ ನಿವೃತ್ತಿ ವೇಳೆಯಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಆವರಣ ಮತ್ತು ಪ್ರಸನ್ನಕುಮಾರ ಬ್ಲಾಕ್ ಆವರಣದಲ್ಲಿ 43 ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಯೋಜನೆಗಳನ್ನು ಕೆಎಚ್‌ಎಸ್‌ಡಿಆರ್‌ಪಿಯ ಎಂಜಿನಿಯರಿಂಗ್ ಘಟಕದ ಮೂಲಕ 155 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು.