ಬೆಂಗಳೂರು: ಎಸ್ಕಾಂಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಇದೀಗ ಕೇಂದ್ರ ಸರ್ಕಾರ ಕೊಡಮಾಡುವ ಅನುದಾನದ ಮೇಲೆ ಕಣ್ಣಿಟ್ಟಿದೆ. ಆ ಮೂಲಕ ಸೊರಗಿರುವ ಎಸ್ಕಾಂಗಳ ಕಾರ್ಯದಕ್ಷತೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಆದರೆ ಆ ಅನುದಾನ ಗಿಟ್ಟಿಸಿಕೊಳ್ಳುವ ಮಾರ್ಗವೇ ರಾಜ್ಯ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ರಾಜ್ಯದ ಎಸ್ಕಾಂಗಳು, ವಿದ್ಯುತ್ ಪ್ರಸರಣ ನಿಗಮಗಳ ಕಾರ್ಯಕ್ಷಮತೆ ವರ್ಷ ವರ್ಷ ಕುಸಿತ ಕಾಣುತ್ತಿದೆ. ಕೋಟ್ಯಂತರ ರೂ. ಬಾಕಿ ಹಣದ ಮೂಲಕ ಎಸ್ಕಾಂಗಳ ಕಾರ್ಯದಕ್ಷತೆ ಪಾತಾಳಕ್ಕೆ ಇಳಿದಿದೆ. ವಿವಿಧ ಮೂಲಗಳಿಂದ ವಿದ್ಯುತ್ ಬಿಲ್ಗಳು ಎಸ್ಕಾಂಗಳಿಗೆ ಪಾವತಿಯಾಗದೇ ಹಲವು ವರ್ಷದಿಂದ ಬೃಹತ್ ಪ್ರಮಾಣದಲ್ಲಿ ಬಾಕಿ ಮೊತ್ತ ಉಳಿದುಕೊಂಡಿದೆ. ಗ್ರಾಮ ಪಂಚಾಯತಿಗಳಿಂದ, ಸಣ್ಣ ನೀರಾವರಿ, ಜಲಸಂಪನ್ಮೂಲ ಇಲಾಖೆ, ಸರ್ಕಾರದ ವಿವಿಧ ಇಲಾಖೆಗಳಿಂದ ಎಸ್ಕಾಂಗಳಿಗೆ ಬೃಹತ್ ಪ್ರಮಾಣದ ಬಿಲ್ ಬಾಕಿ ಉಳಿದುಕೊಂಡಿದೆ. ಇದರಿಂದ ಎಸ್ಕಾಂ, ಪ್ರಸರಣಾ ನಿಗಮದ ಕಾರ್ಯಕ್ಷಮತೆ ದುಸ್ತರವಾಗಿದೆ. ಆರ್ಥಿಕವಾಗಿ ಸೊರಗಿರುವ ಎಸ್ಕಾಂಗಳ ಕಾರ್ಯನಿರ್ವಹಣೆ ಬಡಕಲಾಗಿದೆ.
ಈ ಸಂಬಂಧ ಎಸ್ಕಾಂಗಳ ಕಾರ್ಯಕ್ಷಮತೆ, ಬಲವರ್ಧನೆಗೆ ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಇದೀಗ ವಿದ್ಯುತ್ ವಿತರಣಾ ವಲಯ ಬಲವರ್ಧನೆ (ಆರ್‌ಡಿಎಸ್‌ಎಸ್) ಯೋಜನೆಯಡಿ ಕೇಂದ್ರದಿಂದ ಅಂದಾಜು 8,000 ಕೋಟಿ ರೂ.ಗಳ ನೆರವಿನತ್ತ ರಾಜ್ಯ ಸರ್ಕಾರ ಕಣ್ಣು ಇಟ್ಟಿದೆ. ಆ ಮೂಲಕ ಎಸ್ಕಾಂಗಳ ಪುನಶ್ಚೇತನದ ಇರಾದೆ ಹೊಂದಿದೆ. ಆದರೆ, ಈ ಅನುದಾನ ಗಿಟ್ಟಿಸಿಕೊಳ್ಳುವುದೇ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ರಾಜ್ಯ ಸರ್ಕಾರದ ಮುಂದಿರುವ ಕಗ್ಗಂಟು ಏನು?: ಕೇಂದ್ರದ ಆ ಅನುದಾನ ಪಡೆಯಲು ರಾಜ್ಯ ಸರ್ಕಾರ ವಿದ್ಯುತ್ ಸಾಗಣೆ, ವಿತರಣೆಯಲ್ಲಿ ಕಾರ್ಯಕ್ಷಮತೆ ಹಾಗೂ ಆರ್ಥಿಕತೆಯಲ್ಲಿ ದಕ್ಷತೆ ಹೆಚ್ಚಿಸುವುದಕ್ಕೆ ಆದ್ಯತೆ ನೀಡಬೇಕಾಗಿದೆ. ಅನುದಾನ ಪಡೆಯಲು ಕೇಂದ್ರ ಸರ್ಕಾರ ಕೆಲ ಕಠಿಣ ಷರತ್ತು ವಿಧಿಸಿದೆ. ಎಸ್ಕಾಂಗಳು ಹಾಗೂ ಪ್ರಸರಣಾ ನಿಗಮದ ಕೋಟ್ಯಂತರ ರೂ. ಬಾಕಿ ಹೊರೆ ಇಳಿಸುವ ಅನಿವಾರ್ಯತೆಯಲ್ಲಿದೆ. ಆದರೆ, ಈ ಗುರಿ ಮುಟ್ಟುವುದೇ ಅಕ್ಷರಶಃ ಅಸಾಧ್ಯ ಎಂಬಂತಾಗಿದೆ.
ವಿವಿಧ ಸರ್ಕಾರಿ ಇಲಾಖೆಗಳು, ಸಹಾಯಧನ ಮೊತ್ತವೂ ಒಳಗೊಂಡು ಎಸ್ಕಾಂ ಹಾಗೂ ಪ್ರಸರಣ ನಿಗಮದಲ್ಲಿ ಸುಮಾರು 21,000 ಕೋಟಿ ರೂ. ಬಾಕಿ ಹೊರೆ ಇದೆ. ವರ್ಷಗಳಿಂದ ಮುಂದುವರೆದುಕೊಂಡು ಬಂದಿರುವ ಈ ಬೆಟ್ಟದ ಗಾತ್ರಕ್ಕೆ ಬೆಳೆದಿರುವ ಬಾಕಿ ಹೊರೆ ಇಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಗ್ರಾಮ ಪಂಚಾಯತಿಗಳಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಅಕ್ಟೋಬರ್-2021ರ ಅಂತ್ಯದವರೆಗೆ ಅಸಲು ಮೊತ್ತ 3,518.05 ಕೋಟಿ ರೂ. ಮತ್ತು ಬರೀ ಮೊತ್ತ 711.55 ಕೋಟಿ ರೂ. ಕೋಟಿಗಳನ್ನು ಸೇರಿ ಒಟ್ಟು ಮೊತ್ತ 4,229.60 ಕೋಟಿಗಳನ್ನು ಪಾವತಿಸಲು ಬಾಕಿ ಇದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
2017ರಿಂದ ಈ ಬಾಕಿ ಹಾಗೇ ಉಳಿದುಕೊಂಡಿದೆ. ಇತ್ತ ಎಸ್ಕಾಂಗಳು ಕೆಪಿಸಿಎಲ್ ಗೆ ಪಾವತಿಸಬೇಕಾದ ಸುಮಾರು 18,700 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಕೆರೆ ಭರ್ತಿ ಯೋಜನೆಯಡಿ 600 ಕೋಟಿ ರೂ. ಬಾಕಿಯಿದ್ದು, ಗ್ರಾಮೀಣ ಪ್ರದೇಶದ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಯು ಮುಂದೊಂದು ದಿನ ವಿದ್ಯುತ್ ಇಲ್ಲದೆ ನೆಲಕಚ್ಚುವ ಸಾಧ್ಯತೆಗಳ ಬಗ್ಗೆ ಕಳೆದ ವಾರ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಳವಳ ವ್ಯಕ್ತವಾಗಿದೆ.
ಅನುದಾನ ಗಿಟ್ಟಿಸಲು ಕಠಿಣ ಷರತ್ತು: ಕೇಂದ್ರ ಸರ್ಕಾರದ 8000 ಕೋಟಿ ರೂ.ಅನುದಾನ ಪಡೆಯಲು ರಾಜ್ಯಗಳಿಗೆ ಕಠಿಣ ಷರತ್ತುಗಳನ್ನು ವಿಧಿಸಿದೆ. ಅದರಂತೆ ವಿದ್ಯುತ್ ಸಾಗಣೆ, ವಿತರಣೆ, ಕಾರ್ಯ ಮತ್ತು ಪಾಲನೆ, ಬಿಲ್ ವಸೂಲಿಯಲ್ಲಿ ಲೋಪ-ದೋಷ ನಿವಾರಿಸಿಕೊಳ್ಳಬೇಕಾಗಿದೆ.
ಎಸ್ಕಾಂ ಹಾಗೂ ಪ್ರಸರಣಾ ನಿಗಮಕ್ಕೆ ಬರಬೇಕಾದ ಕೋಟ್ಯಂತರ ಬಾಕಿ ಬಿಲ್ ವಸೂಲಿ ಮಾಡುವ ಕಠಿಣ ಷರತ್ತು ವಿಧಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಟ್ಟದಂತೆ ಬೆಳೆದಿರುವ ಬಾಕಿ ಬಿಲ್ ಪಾವತಿ ಕಷ್ಟಸಾಧ್ಯವಾಗಿದೆ. ಇನ್ನು ವಿತರಣೆಯಲ್ಲಿನ ವಿದ್ಯುತ್ ಸೋರಿಕೆಯನ್ನು ಗಣನೀಯವಾಗಿ ಇಳಿಸಬೇಕು. ವಿದ್ಯುತ್ ಸರಬರಾಜು ಕಂಪನಿಗಳ ಕಾರ್ಯಕ್ಷಮತೆ, ಸಬ್ಸಿಡಿ ಮೊತ್ತ ಪೂರ್ಣ ಪಾವತಿ ಮುಂತಾದ ಕಟ್ಟುಪಾಡುಗಳು ಸರಿದೂಗಿಸುವುದು ದುಸ್ತರವಾಗಲಿದೆ.
ಜೊತೆಗೆ ಫ್ರೀ ಪೆಯ್ಡ್ ಮೀಟರ್ ಅಳವಡಿಕೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು. ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿ ಬಲವರ್ಧನೆ ಗೊಳಿಸುವ ಅಗತ್ಯ ಇದೆ. ಅನೇಕ ವರ್ಷಗಳಿಂದ ಬಾಕಿ ಉಳಿಸಿಕೊಳ್ಳುವುದು ಮುಂದುವರಿದ ಕಾರಣ ಮೊತ್ತದ ಬೆಟ್ಟದ ಗಾತ್ರಕ್ಕೆ ಬೆಳೆದಿದ್ದು, ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ಈ ಷರತ್ತುಗಳನ್ನು ಈಡೇರಿಸುವುದು ಅಕ್ಷರಶಃ ಕಷ್ಟ ಎಂದು ಮೊನ್ನೆ ಸಿಎಂ ನೇತೃತ್ವದಲ್ಲಿ ನಡೆದ ಇಂಧನ ಇಲಾಖೆ ಪರಿಶೀಲನಾ ಸಭೆಯಲ್ಲಿ ಸಂಕಷ್ಟ ತೋಡಿಕೊಂಡಿದ್ದಾರೆ.
ಕೇಂದ್ರ ವಿಧಿಸಿದ ಕಠಿಣ ಪ್ರಸ್ತಾವಿತ ಷರತ್ತುಗಳನ್ನು ಪರಿಷ್ಕರಿಸಿ ವಾಸ್ತವಿಕ ನೆಲೆ ಆಧಾರಿತ, ಅನುಷ್ಠಾನ ಯೋಗ್ಯ ಕ್ರಮಗಳನ್ನು ಅಳವಡಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲು ಇದೀಗ ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಸ್ತೃತ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸುವ ಮುನ್ನ ಇಂಧನ ಸಚಿವರ ನೇತೃತ್ವದ ನಿಯೋಗವನ್ನು ದೆಹಲಿಗೆ ಕಳುಹಿಸಿ, ಕೇಂದ್ರದ ಇಂಧನ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸುವುದು ಸೂಕ್ತವೆಂಬ ಇಂಗಿತ ಸಭೆಯಲ್ಲಿ ವ್ಯಕ್ತವಾಗಿದೆ.
ಇದನ್ನೂ ಓದಿ: ಬಸವಣ್ಣನವರ ಅನುಭವ ಮಂಟಪವನ್ನೇ ಮರುಸೃಷ್ಟಿಸಿ: ಸಿಎಂ ಬೊಮ್ಮಾಯಿ ಸೂಚನೆ