ಬೆಂಗಳೂರು: ಈ ಬಾರಿಯ ಮೈಸೂರು ದಸರಾ ಜಂಬೂ ಸವಾರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಕುರಿತು ರಾಜ್ಯ ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದು, ಪ್ರಧಾನಿ ಕಚೇರಿಯಿಂದ ಇನ್ನು ಈ ಬಗ್ಗೆ ಯಾವುದೇ ಭರವಸೆ ಸಿಕ್ಕಿಲ್ಲ ಎನ್ನಲಾಗಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿದ್ದು, ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾಗಿ ಕೊನೆಯ ದಿನದಂದು ನಡೆಯುವ ಜಂಬೂ ಸವಾರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಬೇಕು ಎಂದು ಬಿಜೆಪಿ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕ ಮಾಡಿದ್ದು, ಜಂಬೂ ಸವಾರಿ ಉದ್ಘಾಟನೆಗೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ಆದರೆ, ಪ್ರಧಾನಿ ಮೋದಿ ಪ್ರವಾಸದ ಬಗ್ಗೆ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.
ಇತ್ತೀಚೆಗಷ್ಟೇ ಮಂಗಳೂರಿಗೆ ಬಂದಿದ್ದ ಮೋದಿ ಪ್ರತಿ ತಿಂಗಳು ರಾಜ್ಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು. ಅದರಂತೆ ಮೈಸೂರು ದಸರಾಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ರಾಷ್ಟ್ರಪತಿಗಳು ಉದ್ಘಾಟಿಸುವ ದಸರಾದ ಕಡೆಯ ದಿನದ ಕಾರ್ಯಕ್ರಮದ ಉದ್ಘಾಟನೆಗೆ ಮೋದಿ ಬರುತ್ತಾರಾ? ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.
ಮೋದಿ ಪ್ರವಾಸದ ಕುರಿತು ಇನ್ನು ಯಾವುದೇ ನಿರ್ಧಾರ ಪ್ರಧಾನಿ ಕಚೇರಿಯಿಂದ ಲಭ್ಯವಾಗಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.
ಓದಿ: ಬೆಂಗಳೂರು ನಗರದ ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಬದ್ದ: ಸಿಎಂ ಬೊಮ್ಮಾಯಿ