ಬೆಂಗಳೂರು: ಪೇಜಾವರ ಶ್ರೀಗಳು ಇಂದು ಉಡುಪಿ ಮಠದಲ್ಲಿ ಅನಾರೋಗ್ಯದಿಂದ ಬೃಂದಾವನಸ್ತರಾಗಿದ್ದಾರೆ. ಶ್ರೀಗಳ ಇಚ್ಚೆಯಂತೆ ಅವರ ಬೃಂದಾವನವನ್ನು ಬೆಂಗಳೂರಿನ ವಿದ್ಯಾಪೀಠ ಮಠದಲ್ಲಿ ನಿರ್ಮಿಸಲು ಮಠದ ಆಡಳಿತ ಮಂಡಳಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಮಠದಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನೀಡಲು ಮಠದ ಆಡಳಿತ ಮಂಡಳಿ ಜೊತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ದೇಶ ಕಂಡ ಅಪರೂಪದ ಯತಿಯಾಗಿದ್ದವರು ಶ್ರೀಗಳು. ಧರ್ಮ ಹಾಗೂ ಸಂಸ್ಕೃತಿ ಬಗ್ಗೆ ಶ್ರೀಗಳು ಅತೀವ ಕಾಳಜಿ ಹೊಂದಿದ್ದರು. ನನಗೆ 30 ವರ್ಷಗಳಿಂದ ಅವರ ಒಡನಾಟ ಇದೆ. ಬಿಜಾಪುರದ ಇಂಡಿಯಲ್ಲಿ ಒಂದು ಹಳ್ಳಿ ಪ್ರವಾಹದಿಂದ ಕೊಚ್ಚಿ ಹೋಗಿತ್ತು. ಆಗ ಪೂಜ್ಯರು ಅಲ್ಲಿಗೆ ಬಂದು ಸಂತ್ರಸ್ತರಿಗೆ ಸಾಂತ್ವನ ಹೇಳಿ ನೆರವು ನೀಡಿದ್ರು. ಮಠದ ವತಿಯಿಂದ ಹೊಸ ಗ್ರಾಮವೇ ನಿರ್ಮಾಣವಾಯ್ತು.
ಉಡುಪಿಯಲ್ಲಿ ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಅನಂತರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ಗಂಟೆಯಿಂದ ವಿದ್ಯಾಪೀಠದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಮಾಹಿತಿ ನೀಡಿದರು.
ಅಲ್ಲದೇ, ಇದೇ ವೇಳೆ ಮಾತನಾಡಿದ ಮಠದ ಆಡಳಿತ ಮಂಡಳಿಯ ಸದಸ್ಯರಾದ ಕೇಶವಾಚಾರ್ಯ ಮಾತನಾಡಿ, ವಿದ್ಯಾಪೀಠದಲ್ಲಿ ಖಾಸಗಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತೇವೆ. ಕಾರ್ಯಕ್ರಮ ವಿಶ್ವ ಪ್ರಸನ್ನ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ರಾತ್ರಿ 8 ಗಂಟೆ ಒಳಗೆ ನೇರವೇರಲಿದೆ.
ಶ್ರೀಗಳ ಪಾರ್ಥೀವ ಶರೀರವನ್ನು ಹೆಚ್ಎಎಲ್ ಏರ್ ಪೋರ್ಟ್ ನಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೇ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.