ಬೆಂಗಳೂರು: ನಾಡೋಜ, ಪದ್ಮಶ್ರೀ ಪುರಸ್ಕೃತ 'ನಿತ್ಯೋತ್ಸವ' ಕವಿ ನಿಸಾರ್ ಅಹಮದ್ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂತಾಪ ಸೂಚಿಸಿದೆ.
ವಿಡಂಬನಾತ್ಮಕವಾಗಿ ರಾಜಕಾರಣಿಗಳು ಸೇರಿದಂತೆ ಎಲ್ಲರನ್ನೂ ತಮ್ಮ ಸಾಹಿತ್ಯದ ಮೂಲಕವೇ ಎಚ್ಚರಿಸುತ್ತಿದ್ದ ನಿಸಾರ್ ಅಹಮದ್ ಅವರ ನಿಧನ ನಾಡಿಗೆ ತುಂಬಲಾರದ ನಷ್ಟ. ಇಂಥ ಸಾಹಿತಿಗಳ ಸೇವೆ ಈ ನಾಡಿಗೆ ಇನ್ನೂ ಅಗತ್ಯವಿತ್ತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಬೇಸರ ವ್ಯಕ್ತಪಡಿಸಿದ್ದಾರೆ.
ನಾಡು-ನುಡಿಯ ಬಗ್ಗೆ ಈಗಿನ ಜನರ ಶೂನ್ಯತೆ ಕುರಿತಾಗಿ ಬೇಸರ ವ್ಯಕ್ತಪಡಿಸುತ್ತಿದ್ದ ನಿಸಾರ್ ಅಹಮದ್ ಅವರು, 14 ಕವನ ಸಂಕಲನ, 10 ಗದ್ಯಕೃತಿಗಳು, ಐದು ಮಕ್ಕಳ ಸಾಹಿತ್ಯ ಗ್ರಂಥಗಳು, ಅನುವಾದ ಗ್ರಂಥ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳ ಹಲವಾರು ಕೃತಿಗಳು ಅವರ ಬರವಣಿಗೆ ಮೂಸೆಯಿಂದ ಮೂಡಿವೆ.
ಇವರ ಹಲವಾರು ಕವಿತೆಗಳು ಹಿಂದಿ, ಇಂಗ್ಲಿಷ್, ಉರ್ದು, ಮಲಯಾಳಂ, ತೆಲುಗು, ತಮಿಳು, ಚೀನಿ ಮುಂತಾದ ಭಾಷೆಗಳಿಗೆ ಅನುವಾದಗೊಂಡಿರುವುದು ಅವರ ಸಾಹಿತ್ಯ ಪ್ರೌಢಿಮೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ.
ಇಂತಹ ಮೇರು ವ್ಯಕ್ತಿತ್ವದ ನಿಸಾರ್ ಅಹಮದ್ ಅವರಿಗೆ ವಿಶ್ವಮಾನವ ಪ್ರಶಸ್ತಿ, ವಿಕೃ ಗೋಕಾಕ್ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳು ಸಂದಿವೆ. 73ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಕೂಡ ಒಲಿದುಬಂದಿತ್ತು. ಆ ಸಂದರ್ಭದಲ್ಲಿ ನಮ್ಮ ನಾಡಿನ ಆಚಾರ-ವಿಚಾರಗಳಿಗೆ ತಕ್ಕಂತೆ ನಡೆದುಕೊಂಡಿದ್ದನ್ನ ಸ್ಮರಿಸಬಹುದು.
ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸಾಕಷ್ಟು ಉತ್ತಮವಾದ ಕೆಲಸಗಳನ್ನು ಮಾಡಿದ್ದಾರೆ. ಅವರ ನಿಧನದ ಸುದ್ದಿ ನೋವಿನ ಸಂಗತಿಯಾಗಿದ್ದು ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಆ ದೇವರು ಕರುಣಿಸಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.