ETV Bharat / state

ಗಣರಾಜ್ಯೋತ್ಸವ: ಬಸವಣ್ಣನ ಜೀವನಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ - Lalbagh flower Show

ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಲಾಲ್​ಬಾಗ್​ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ತಯಾರಿ ನಡೆಯುತ್ತಿದೆ.

Preparation for flower Show
ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ
author img

By ETV Bharat Karnataka Team

Published : Dec 31, 2023, 1:34 PM IST

ಬೆಂಗಳೂರು: 2024ರ ಗಣರಾಜ್ಯೋತ್ಸವದ ಅಂಗವಾಗಿ ನಗರದ ಲಾಲ್​ಬಾಗ್​ನಲ್ಲಿ ಹಮ್ಮಿಕೊಳ್ಳುವ ಫಲಪುಷ್ಪ ಪ್ರದರ್ಶನಕ್ಕೆ ಪ್ರಸಕ್ತ ವರ್ಷ ವಿಶ್ವಗುರು ಬಸವಣ್ಣನ ಜೀವನ, ಸಂದೇಶಗಳನ್ನು ನೀಡುವ ಕುರಿತ ವಿಷಯವಸ್ತು ಆಯ್ಕೆ ಮಾಡಿಕೊಂಡಿರುವ ರಾಜ್ಯ ತೋಟಗಾರಿಕೆ ಇಲಾಖೆ, ಪ್ರದರ್ಶನಕ್ಕೆ ಭರದ ಸಿದ್ದತೆ ನಡೆಸುತ್ತಿದೆ. ಬಸವಣ್ಣನವರನ್ನು ಪುಷ್ಪಗಳಿಂದಲೇ ಜನರಿಗೆ ತೋರಿಸುವ ಮೂಲಕ ಅವರ ಕುರಿತ ಸಂದೇಶವನ್ನು ತಿಳಿಸಲು ಮುಂದಾಗಿರುವ ಇಲಾಖೆ ಜನವರಿ 18ರಿಂದ 28ರವರೆಗೆ ಅಂದರೆ 11 ದಿನಗಳ ಕಾಲ ವಚನ ಸಾಹಿತ್ಯದ ಪರಿಕಲ್ಪನೆಯಡಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುತ್ತಿದೆ.

Preparation for flower Show
ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ

12ನೇ ಶತಮಾನದ ತತ್ವಜ್ಞಾನಿ, ಸಮಾಜ ಸುಧಾರಕ ಬಸವಣ್ಣ ಲಿಂಗ ತಾರತಮ್ಯದೊಂದಿಗೆ ಮೂಢನಂಬಿಕೆಗಳನ್ನು ನಿರಾಕರಿಸಿದ್ದರು. ಮಹಿಳೆಯರಿಗೆ ಸಮಾನತೆ ಸಿಗಬೇಕೆಂದು ಪ್ರತಿಪಾದಿಸಿದ್ದರು. ಅವರ ಚಿಂತನೆ, ಕಾಯಕ ವೈಖರಿಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿವೆ. ಹೀಗಾಗಿ, ಈ ಬಾರಿ 'ಬಸವಣ್ಣ ಮತ್ತು ವಚನ ಸಾಹಿತ್ಯ' ಕುರಿತಂತೆ ಪುಷ್ಪ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ ಮತ್ತಿತರ ವಚನಕಾರರ ಪ್ರತಿಮೆಗಳು, ಅವರ ವಚನಗಳು ಮತ್ತು ವಚನಕಾರರ ಅಂಕಿತನಾಮಗಳು ಹೀಗೆ ಸಮಗ್ರ ವಚನ ಸಾಹಿತ್ಯವೇ ಫಲಪುಷ್ಪ ಪ್ರದರ್ಶನದಲ್ಲಿರಲಿದೆ. ಇದೊಂದು ಜ್ಞಾನದ ಕಣಜವಾಗಲಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದರೆ, ನೋಡುಗರಿಗೆ ಜ್ಞಾನದ ಅರಿವಿನ ತಾಣವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು. ಚಳಿಗಾಲದಲ್ಲಿ ಸಾಕಷ್ಟು ಅಪರೂಪದ ಹಾಗೂ ಆಕರ್ಷಕ ಹೂವುಗಳ ಲಭ್ಯವಾಗುವುದರಿಂದ ರಾಜ್ಯದ ವಿವಿಧ ಗಿರಿಧಾಮಗಳಿಂದ ಹೂಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಮೂಲಕ ವಚನ ಪ್ರಬುದ್ಧತೆಯನ್ನು ಸಾರಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ವಿವರಿಸಿದರು.

Preparation for flower Show
ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ

ಇದನ್ನೂ ಓದಿ: 'FIRನಲ್ಲಿ ತಮ್ಮನ ಹೆಸರೇ ಇಲ್ಲ, ಆದರೂ ಬಂಧಿಸುವ ಮೂಲಕ ನನ್ನನ್ನು ಮುಗಿಸುವ ಯತ್ನ'

ಲಾಭ-ನಷ್ಟದ ಪ್ರಶ್ನೆಯೇ ಇಲ್ಲ: ಫಲಪುಷ್ಪ ಪ್ರದರ್ಶನವನ್ನು ಲಾಭ ಗಳಿಸುವ ದೃಷ್ಟಿಯಿಂದ ಆಯೋಜನೆ ಮಾಡುತ್ತಿಲ್ಲ. ಸಮಾಜಕ್ಕೆ ಸಂದೇಶ ನೀಡುವುದು, ವಿಶೇಷ ಸಾಧನೆ ಮಾಡಿರುವವರ ಕುರಿತಂತೆ ಸಾರ್ವಜನಿಕರಿಗೆ ಜ್ಞಾನಾರ್ಜನೆ ಮೂಡಿಸುವ ಉದ್ದೇಶದಿಂದ ಪ್ರದರ್ಶನವನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದೇವೆ. ಲಾಭಕ್ಕಾಗಿ ಮಾಡುತ್ತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Preparation for flower Show
ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ

ಇದನ್ನೂ ಓದಿ: ಐಪಿಎಸ್‌ ಅಧಿಕಾರಿಗಳ ಬಡ್ತಿ, ವರ್ಗಾವಣೆ: ಹೊಸ ವರ್ಷಕ್ಕೂ ಮುನ್ನ ಸರ್ಕಾರದ ಸರ್ಜರಿ

ಗಣರಾಜ್ಯೋತ್ಸವಕ್ಕೆ ಹಮ್ಮಿಕೊಳ್ಳುವ ಫಲಪುಷ್ಪ ಪ್ರದರ್ಶನದಲ್ಲಿ ಈ ಮೊದಲಿನಿಂದಲೂ ನಷ್ಟವೇ ಆಗುತ್ತಿದೆ. ಆದರೆ, ಆಗಸ್ಟ್​ ತಿಂಗಳಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದ ಪ್ರದರ್ಶನದಲ್ಲಿ ಅಲ್ಪ ಪ್ರಮಾಣದಲ್ಲಿ ಲಾಭವಾಗಲಿದೆ. ಅದರಲ್ಲಿ ಜನವರಿ ಪ್ರದರ್ಶನವನ್ನು ಸರಿದೂಗಿಸಲಾಗುತ್ತಿದೆ. ಆದರೆ, ಇದನ್ನು ಲಾಭ, ನಷ್ಟದ ಉದ್ದೇಶದಿಂದ ಹಮ್ಮಿಕೊಳ್ಳುತ್ತಿಲ್ಲ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಕುಸಮಾ ಮಾಹಿತಿ ನೀಡಿದರು.

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.