ಬೆಂಗಳೂರು: ಎರಡು ಬಾರಿ ಅಂಧರ ಟಿ20 ವರ್ಲ್ಡ್ ಕಪ್ನಲ್ಲಿ ಪಾಕಿಸ್ತಾನವನ್ನು ಮಣಿಸಿ ಈವರೆಗೆ ಐದು ಕಪ್ಗಳನ್ನು ಗೆದ್ದು ಬಂದ ಅಂಧರ ತಂಡ ಇದೀಗ ಮೂರನೇ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಸಿದ್ಧತೆ ನಡೆಸುತ್ತಿದೆ. ಆನೇಕಲ್ನ ರಾಮಸಾಗರದ ಸಚಿನ್ ಕ್ರೀಡಾಂಗಣದಲ್ಲಿ ಆಟಗಾರರು ತಾಲೀಮು ನಡೆಸುತ್ತಿದ್ದಾರೆ.
ಈ ಬಾರಿ ಬೆಂಗಳೂರಿನಲ್ಲಿಯೇ ನಡೆಯುತ್ತಿರುವ ಅಂಧರ ಟಿ20 ವರ್ಲ್ಡ್ ಕಪ್ ಮ್ಯಾಚ್ ಡಿಸೆಂಬರ್ 6 ರಿಂದ ಶುಭಾರಂಭವಾಗಲಿದೆ. ಬಹುಮುಖ್ಯವಾಗಿ ನಮ್ಮ ಹೆಮ್ಮೆಯ ಕ್ರಿಕೆಟರ್ ಯುವರಾಜ್ ಸಿಂಗ್ ಭಾರತದ ಅಂಧರ ತಂಡದ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಅಜಯ್ ಕುಮಾರ್ ರೆಡ್ಡಿ ನಾಯಕತ್ವದಲ್ಲಿ ಪಂದ್ಯ ನಡೆಯಲಿದೆ. ಬೆಳಗ್ಗೆ ಆರು ಗಂಟೆಯಿಂದ ಸಂಜೆವರೆಗೂ ಆಟಗಾರರಿಗೆ ತರಬೇತಿ ನೀಡಲಾಗುತ್ತಿದೆ.
ಇದನ್ನೂ ಓದಿ: T20WorldCup: ಅಡಿಲೇಡ್ ಸ್ಟೇಡಿಯಂ ಹೊರಗೆ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ
ಈಗಾಗಲೇ 17 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಕರ್ನಾಟಕದ ಮೂರು ಮಂದಿ ಆಯ್ಕೆಯಾಗಿದ್ದಾರೆ. ತಂಡದ 11ಮಂದಿಯಲ್ಲಿ ಬಿ1 ಕೆಟಗರಿಯ ನಾಲ್ವರು ಆಟಗಾರರಿದ್ದು, ಬಹುತೇಕ ಅಂಧರಾಗಿರುತ್ತಾರೆ. ಬಿ2 ಕೆಟಗರಿಯಲ್ಲಿ ಮೂರು ಮೀಟರ್ವರೆಗೆ ದೃಷ್ಟಿ ಕಾಣುತ್ತದೆ. ಬಿ3 ಕೆಟಗರಿಯಲ್ಲಿ ಆರು ಮೀಟರ್ ವರೆಗೆ ದೃಷ್ಟಿ ಕಾಣುತ್ತದೆ. ಅಂಧರ ಕ್ರಿಕೆಟ್ನಲ್ಲಿ ಪ್ಲಾಸ್ಟಿಕ್ ಬಾಲ್ ಬಳಸಲಾಗುತ್ತಿದ್ದು, ಬಾಲ್ ಒಳಗೆ ಸೈಕಲ್ನ ಬೇರಿಂಗ್ಗಳನ್ನು ಹಾಕಿ ಶಬ್ದ ಬರುವ ರೀತಿ ಮಾಡಲಾಗಿರುತ್ತದೆ. ಅದರ ಶಬ್ದವನ್ನ ಗ್ರಹಿಸಿ ಆಟಗಾರರು ಕ್ಷೇತ್ರ ರಕ್ಷಣೆ ಮತ್ತು ಬ್ಯಾಟಿಂಗ್ ಮಾಡುತ್ತಾರೆ. ಈ ಬಾರಿ ಏಳು ದೇಶಗಳು ಕಣಕ್ಕಿಳಿಯಲಿದ್ದು, ಮೂರನೇ ಬಾರಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಕೋಚ್ ಆಸಿಫ್ ತಿಳಿಸಿದ್ದಾರೆ.
ಇದನ್ನೂ ಓದಿ: ಭವಿಷ್ಯ ರೂಪಿಸಿಕೊಳ್ಳಲು ನ್ಯೂಜಿಲ್ಯಾಂಡ್ ಪ್ರವಾಸ ನಿಮಗೆ ಉತ್ತಮ ಅವಕಾಶ: ಹೊಸ ಹುಡುಗರಿಗೆ ಹಾರ್ದಿಕ್ ಹಾರೈಕೆ