ಬೆಂಗಳೂರು:ವಿಧಾನಸಭೆ ಚುನಾವಣೆ ವರ್ಷದ ಪ್ರಯುಕ್ತ ಈ ಬಾರಿ ಜನಪ್ರಿಯ ಬಜೆಟ್ ಮಂಡನೆಗೆ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಕಸರತ್ತು ನಡೆಸಿದ್ದಾರೆ. ಅತ್ಯುತ್ತಮ ಬಜೆಟ್ ನಿಡುವ ದೃಷ್ಟಿಯಿಂದ ರಾಜ್ಯ ಸರಕಾರದ ಇಲಾಖೆವಾರು ಬಜೆಟ್ ಪೂರ್ವಭಾವಿ ಸಭೆಗಳನ್ನು ಸಂಕ್ರಾಂತಿ ವೇಳೆಗೆ ನಡೆಸಲಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಬಹುತೇಕ ಮೇ ತಿಂಗಳಲ್ಲಿ ನಡೆಯುವ ಸಂಭವ ಇರುವುದರಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಬಾರಿ ಮಾರ್ಚ್ ತಿಂಗಳ ಬದಲಿಗೆ ಫೆಬ್ರವರಿಯಲ್ಲಿಯೇ ಮುಂಗಡಪತ್ರವನ್ನು ಮಂಡಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಜೆಟ್ ಪೂರ್ವಭಾವಿ ಸಭೆಗಳನ್ನು ಸಿಎಂ ಜನವರಿ 2ನೇ ವಾರದಿಂದಲೇ ನಡೆಸಲು ತೀರ್ಮಾನಿಸಿದ್ದಾರೆ.
ಮಾರ್ಚ್ ತಿಂಗಳ ಬದಲು ಫೆಬ್ರುವರಿ ತಿಂಗಳಲ್ಲಿಯೇ ಬಜೆಟ್ ಮಂಡನೆ ಸಾಧ್ಯತೆ: ಬಜೆಟ್ ಪೂರ್ವಭಾವಿ ಸಭೆಗೆ ಮಾಹಿತಿಗಳೊಂದಿಗೆ ಸಿದ್ಧರಾಗಿ ಆಗಮಿಸುವಂತೆ ರಾಜ್ಯ ಸರ್ಕಾರದ ಹಲವಾರು ಇಲಾಖೆಗಳ ಸಚಿವರುಗಳು ಮತ್ತು ಉನ್ನತ ಅಧಿಕಾರಿಗಳಿಗೆ ಈಗಾಗಲೇ ಮುಖ್ಯಮಂತ್ರಿಗಳ ಸಚಿವಾಲಯದಿಂದ ಸೂಚನೆ ಕಳುಹಿಸಲಾಗಿದೆ ಎಂದು ರಾಜ್ಯ ಸರಕಾರದ ವಿಶ್ವಸನೀಯ ಮೂಲಗಳು ತಿಳಿಸಿವೆ . ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಮಂಡಿಸಲಿರುವ ಆಯ - ವ್ಯಯ ಪತ್ರಕ್ಕೆ ಫೆಬ್ರವರಿ ಎರಡನೇ ವಾರದಿಂದ ಮುಂಗಡಪತ್ರದ ಪೂರ್ವಭಾವಿ ಸಭೆಯನ್ನ ನಡೆಸಲಾಗುತ್ತಿತ್ತು. ಆದರೆ, ಈ ವರ್ಷ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಗಳು ಇರುವುದರಿಂದ ಮಾರ್ಚ್ ತಿಂಗಳ ಬದಲು ಫೆಬ್ರುವರಿ ತಿಂಗಳಲ್ಲಿಯೇ ಬಜೆಟ್ ಮಂಡಿಸುವ ಸಂಬಂಧ ಸಿದ್ಧತೆಗಳನ್ನು ಸಿಎಂ ಆರಂಭಿಸಿದ್ದಾರೆ.
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಗಳು, ಇಲಾಖೆಗಳ ಜೊತೆಗಿನ ಸಭೆ ಅಲ್ಲದೆ ಹಲವಾರು ಸಂಘ ಸಂಸ್ಥೆಗಳ ಸಭೆ ನಡೆಸಿ ಬಜೆಟ್ ಬೇಡಿಕೆಗಳ ಬಗ್ಗೆ ಮಾಹಿತಿಗಳನ್ನ ಸಂಗ್ರಹ ಮಾಡಲಿದ್ದಾರೆ. ರೈತ ಸಂಘಗಳು, ಎಫ್ಕೆಸಿಸಿಐ ಸೇರಿದಂತೆ ಹಲವು ಪ್ರಮುಖ ಸಂಘ ಸಂಸ್ಥೆಗಳು ಮತ್ತು ವಾಣಿಜ್ಯೋದ್ಯಮ ಸಂಸ್ಥೆಗಳ ಜೊತೆ ಮುಖ್ಯಮಂತ್ರಿ ಬೊಮ್ಮಾಯಿ ಬಜೆಟ್ ಪೂರ್ವಭಾವಿ ಸಭೆಯನ್ನು ನಡೆಸಲಿದ್ದಾರೆ. ಫೆಬ್ರವರಿ ತಿಂಗಳ ಮೊದಲ ವಾರದೊಳಗೆ ಸರ್ಕಾರದ ಎಲ್ಲ ಪ್ರಮುಖ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಜೊತೆಗಿನ ಬಜೆಟ್ ಪೂರ್ವಭಾವಿ ಸಭೆಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿರ್ಧರಿಸಿದ್ದಾರೆಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.
ಜನಪ್ರಿಯ ಆಯ - ವ್ಯಯ ಪತ್ರ ಮಂಡಿಸಲು ಮುಖ್ಯಮಂತ್ರಿ ಬೊಮ್ಮಾಯಿ ಆಸಕ್ತಿ: ಚುನಾವಣಾ ವರ್ಷವಾಗಿದ್ದರಿಂದ ಜನಪ್ರಿಯ ಆಯ - ವ್ಯಯ ಪತ್ರ ಮಂಡಿಸಲು ಮುಖ್ಯಮಂತ್ರಿ ಬೊಮ್ಮಾಯಿ ಆಸಕ್ತಿ ವಹಿಸಿದ್ದು ಅದಕ್ಕಾಗಿ ಉತ್ತಮ ಯೋಜನೆಗಳನ್ನು ಘೋಷಣೆ ಮಾಡುವ ಸಂಬಂಧ ಆಪ್ತ ಸಚಿವರಲ್ಲಿ ಕೆಲವು ಸಲಹೆಗಳನ್ನು ಸಹ ನೀಡಲು ತಿಳಿಸಿದ್ದಾರೆಂದು ಹೇಳಲಾಗಿದೆ. ಚುನಾವಣೆಯಲ್ಲಿ ತಮ್ಮ ಪಕ್ಷ ಬಿಜೆಪಿಗೆ ಹೆಚ್ಚಿನ ಮತಗಳನ್ನ ಸೆಳೆಯುವಂತೆ ಆಕರ್ಷಕ ಯೋಜನೆಗಳನ್ನ ಘೋಷಣೆ ಮಾಡುವ ಬಗ್ಗೆ ಸಿಎಂ ಬೊಮ್ಮಾಯಿ ತಮ್ಮ ಗಮನವನ್ನು ಹರಿಸಿದ್ದಾರೆ.
ದುಡಿಯುವ ವರ್ಗಕ್ಕೆ ಹೆಚ್ಚಿನ ಆದ್ಯತೆ:ಈ ಬಾರಿಯ ಮುಂಗಡಪತ್ರದಲ್ಲಿ ದುಡಿಯುವ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಿಎಂ ಹೆಚ್ಚಿನ ಒತ್ತನ್ನು ನೀಡುವ ಸಾಧ್ಯತೆಗಳಿವೆ. ಮೀಸಲಾತಿ ಹೆಚ್ಚಳ ಬಗ್ಗೆ ಸರ್ಕಾರ ತನ್ನ ಸ್ಪಷ್ಟ ನಿಲುವನ್ನ ಬಜೆಟ್ ನಲ್ಲಿ ಪ್ರಸ್ತುತಪಡಿಸಲಿದೆ ಎಂದು ಗೊತ್ತಾಗಿದೆ. ಹಿಂದೂ ಅಜೆಂಡಾ ಬಗ್ಗೆಯೂ ಬಜೆಟ್ ನಲ್ಲಿ ಹಲವಾರು ಘೋಷಣೆಗಳನ್ನು ಮಾಡುವ ಸಾಧ್ಯತೆ ಗಳಿವೆ. ರಾಮನಗರದ ಐತಿಹಾಸಿಕ ರಾಮದೇವರ ಬೆಟ್ಟವಾದಲ್ಲಿ ಅಯೋಧ್ಯ ಮಾದರಿಯ ದೇವಸ್ಥಾನ ನಿರ್ಮಾಣಕ್ಕೆ ಬಜೆಟ್ ಅಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರು ಪ್ರಸ್ತಾಪ ಮಾಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ.
ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಸೇರಿದಂತೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹಲವಾರು ಯೋಜನೆಗಳ ಘೋಷಣೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಹೊಸ ಬಜೆಟ್ ನಲ್ಲಿ ಪ್ರಸ್ತಾಪಿಸಬೇಕಾದ ಅಂಶಗಳ ಜೊತೆಗೆ ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿದ ಯೋಜನೆಗಳು ಎಷ್ಟು ಪ್ರಮಾಣದಲ್ಲಿ ಅನುಷ್ಠಾನಗೊಂಡಿವೆ. ಇನ್ನೂ ಯಾವ ಯೋಜನೆಗಳನ್ನ ಕಾರ್ಯಗತಗೊಳಿಸುವುದು ಬಾಕಿ ಇದೆ ಎನ್ನುವ ಬಗ್ಗೆಯೂ ಮುಖ್ಯಮಂತ್ರಿಗಳು ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ.
ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕಳೆದ ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಹಣದಲ್ಲಿ ಎಷ್ಟು ಅನುದಾನ ಖರ್ಚಾಗಿದೆ ಮತ್ತು ಎಷ್ಟು ಅನುದಾನ ವೆಚ್ಚವಾಗದೇ ಉಳಿದಿದೆ ಎನ್ನುವ ಬಗ್ಗೆಯೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ವಿವರಗಳನ್ನು ಪಡೆದು ಹೊಸ ಬಜೆಟ್ ನಲ್ಲಿ ಹಣಕಾಸನ್ನ ಹಂಚಿಕೆ ಮಾಡುವ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ.
ಇದನ್ನೂ ಓದಿ:ವಿಧಾನಸೌಧದ ಎದುರು ಬಸವಣ್ಣ ಕೆಂಪೇಗೌಡರ ಅಶ್ವಾರೋಹಿ ಪ್ರತಿಮೆ ಸ್ಥಾಪನೆ: ಸಚಿವರಿಂದ ಸ್ಥಳ ಪರಿಶೀಲನೆ