ಬೆಂಗಳೂರು: ನಗರ ಪಾಲಿಕೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಪಿಒಪಿ ಗಣೇಶನ ಮೂರ್ತಿ ಮಾರಾಟವನ್ನು ಬ್ಯಾನ್ ಮಾಡಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಮಾತ್ರ ಪಿಒಪಿ ಗಣೇಶ ವಿಗ್ರಹಗಳಿಗೆ ಹೆಚ್ಚು ಬೇಡಿಕೆ ಕೇಳಿ ಬರುತ್ತಿದೆ.
ಅಂಗಡಿಗೆ ಬರುವ ಗ್ರಾಹಕರೆಲ್ಲಾ ಮಾಲೀಕರ ಬಳಿ ತಮಗೆ ಪಿಒಪಿ ಗಣೇಶ ಇದ್ದರೆ ಕೊಡಿ ಅಂತಿದ್ದಾರೆ. ಮನೆಯಲ್ಲಿಟ್ಟು ಪೂಜೆ ಮಾಡುವವರು ಮಣ್ಣಿನ ಗಣಪತಿಯನ್ನ ಕೇಳಿದ್ರೆ, ಗಲ್ಲಿ ಗಲ್ಲಿಗಳಲ್ಲಿ ಗಣೇಶನನ್ನು ಕೂರಿಸುವ ಹುಡುಗರು ನಮಗೆ ಪಿಒಪಿ ಗಣೇಶನೇ ಬೇಕು ಅಂತಿದ್ದಾರಂತೆ. ಮಣ್ಣಿನಿಂದ ಮಾಡಿರೋ ಮೂರ್ತಿಯನ್ನ ಖರೀದಿ ಮಾಡಿ ಅಂದರೆ ಅದನ್ನ ಸಾಗಿಸುವುದೇ ದೊಡ್ಡ ತಲೆನೋವು ಸ್ವಾಮಿ ಅಂತಿದ್ದಾರಂತೆ.
ಅಂದಹಾಗೇ, ಸರ್ಕಾರ ಪಿಓಪಿ ಗಣೇಶ ಪರಿಸರಕ್ಕೆ ಮಾರಕವಾಗಿದ್ದು, ಅದನ್ನ ಬಳಸುವಂತಿಲ್ಲ ಎಂಬ ಖಡಕ್ ಆದೇಶವನ್ನೇನೋ ಹೊರಡಿಸಿದೆ. ಆದರೆ ಸಾರ್ವಜನಿಕರು ಮಾತ್ರ ಇದಕ್ಕೆ ಕಿಮ್ಮತ್ತು ಕೊಟ್ಟಂತೆ ಕಾಣ್ತಿಲ್ಲ. ಮಣ್ಣಿನಲ್ಲಿ ಹೊಸ ಡಿಸೈನ್ಗಳು ಸಿಗೋದಿಲ್ಲ. ಹೀಗಾಗಿ ಪಿಓಪಿ ಗಣೇಶನೇ ಬೇಕು ಅಂತಿದ್ದಾರೆ ಗ್ರಾಹಕರು ಎಂದು ಅಂಗಡಿ ಮಾಲೀಕ ಶ್ರೀಧರ್ ಹೇಳುತ್ತಾರೆ.
ಗ್ರಾಹಕರಿಂದ ಪಿಒಪಿ ಗಣೇಶನೇ ಬೇಕೆಂಬ ಕೂಗು ಯಾಕೆ:
1. ಪಿಓಪಿ ಗಣೇಶನ ಮೂರ್ತಿಯಲ್ಲಿ ಬಹಳಷ್ಟು ಡಿಸೈನ್ಗಳು ಲಭ್ಯ.
2. ಮೂರ್ತಿ ತೂಕ ಕೂಡ ಕಡಿಮೆ ಇರುತ್ತದೆ.
3. ಸಾಗಣೆ ಹಾಗೂ ನಿರ್ವಹಣೆ ಕೂಡ ಸುಲಭ.
4. ಆದರೆ ಮಣ್ಣಿನ ಮೂರ್ತಿ ಹಾಗಲ್ಲ ಕೊಂಚ ಎಡವಟ್ಟಾದ್ರು ಗಣೇಶನ ಹಬ್ಬಕ್ಕೆ ಮೊದಲೇ ಗಣಪನ ವಿಸರ್ಜನೆ ಮಾಡಬೇಕಾಗುತ್ತೆ.
5. ಬಿಬಿಎಂಪಿ ಆದೇಶಕ್ಕೆ ಸೈ ಅನ್ನುವ ಗ್ರಾಹಕರು ಪಿಓಪಿ ಗಣೇಶ ವಿಸರ್ಜನೆಗಾಗಿ ಬೇರೆ ವ್ಯವಸ್ಥೆ ಕಲ್ಪಿಸಿಕೊಡಿ ಅಂತಿದ್ದಾರೆ.
6. ಇದು ಮಳೆಗಾಲವಾಗಿರೋದ್ರಿಂದ ಹಬ್ಬದ ವರೆಗೂ ಮಣ್ಣಿನ ಗಣೇಶನನ್ನು ಕಾಪಾಡಿಕೊಳ್ಳುವುದು ಕೂಡ ಹರಸಾಹಸವೇ.
ಇಷ್ಟೆಲ್ಲ ಕಾರಣಕ್ಕಾಗಿ ಮಾರಾಟಗಾರರಿಗಿಂತ ಸಾರ್ವಜನಿಕರಿಗೆ ಪಿಒಪಿ ಮೂರ್ತಿಯ ಮೇಲೆ ವ್ಯಾಮೋಹ ಜಾಸ್ತಿಯಾಗಿದೆ. ಒಟ್ಟಾರೆ ಜನರಿಗೆ ಮೊದಲು ಜಾಗೃತಿ ಮೂಡಿಸದೇ ಇದ್ದರೆ ಮುಂದೊಂದಿನ ಕಳ್ಳದಾರಿ ಹಿಡಿದಾದರೂ ಪಿಒಪಿ ಗಣೇಶನನ್ನ ಕೂರಿಸಲು ಮುಂದಾಗೋದು ಸತ್ಯ.