ಬೆಂಗಳೂರು: ರಾಜಕೀಯ ವ್ಯಕ್ತಿಯಾಗಿ ಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಕೆಲಸದಲ್ಲಿದ್ದೇವೆ. ರಾಜಕೀಯ ಸಾಕಷ್ಟು ಸವಾಲಿನ ವೃತ್ತಿಯಾದರೂ ತೃಪ್ತಿ ತಂದಿದೆ ಎಂದು ಸಿ ಎಂ ಬಸವರಾಜ ಬೊಮ್ಮಾಯಿ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು. ಸಿಲಿಕಾನ್ ಸಿಟಿಯ ಜೆ.ಪಿ ನಗರದ ಆರ್ ವಿ ಡೆಂಟಲ್ ಕಾಲೇಜಿನ ಆಡಿಟೋರಿಯಂನಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ವಿದ್ಯಾರ್ಥಿ ಜೀವನ, ಜೀವನಾನುಭ, ರಾಜಕೀಯ ವೃತ್ತಿ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರಲ್ಲದೇ ವಿದ್ಯಾರ್ಥಿಗಳಿಗೆ ಸಲಹೆಯನ್ನೂ ನೀಡಿದರು.
ನಿಮ್ಮ ಜೀವನದಲ್ಲಿ ಯಾವ ವೃತ್ತಿ, ಯಾವ ಹಂತ ನಿಮಗೆ ಸಾಕಷ್ಟು ಖುಷಿ ನೀಡಿದೆ? ಎಂಬ ಕೂ ಸಂಸ್ಥಾಪಕ ಅಪ್ರಮೇಯ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸುತ್ತಾ, ವಿದ್ಯಾರ್ಥಿ ಜೀವನವೇ ಅತ್ಯುತ್ತಮ. ನಾನು ವಿದ್ಯಾರ್ಥಿಯಾದ ದಿನಗಳನ್ನು ಸಾಕಷ್ಟು ನೆನೆಯುತ್ತೇನೆ. ಕೊನೆ ಬೆಂಚ್‌ನಲ್ಲಿ ಕೂರುವ ವಿದ್ಯಾರ್ಥಿಯ ದಿನಗಳು ಅತ್ಯಂತ ಖುಷಿ ನೀಡಿವೆ. ಒಬ್ಬ ಬ್ಯುಸಿನೆಸ್ ಮ್ಯಾನ್ ಆಗಿ ಖುಷಿ ನೀಡಿದರೆ, ಇನ್ನೊಬ್ಬರಿಗೆ ಉದ್ಯೋಗ ದೊರಕಿಸುವುದು ಮತ್ತೊಂದು ರೀತಿಯ ತೃಪ್ತಿಯ ಭಾವ ನೀಡುತ್ತದೆ ಎಂದರು.
ಭಾರತದ ಬೆಳವಣಿಗೆಯ ಇಂಜಿನ್ ಕರ್ನಾಟಕ: ಈ ದೇಶದ ಸಾಧ್ಯತೆಗಳು, ಅವಕಾಶಗಳು ಬೇರೆ ಎಲ್ಲೂ ಇಲ್ಲ. ನಮ್ಮ ಕರ್ತವ್ಯ ಕಾಲವಿದು ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ. ನಾವು ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂದಿದ್ದೇವೆ. ಈ ಹಿಂದೆ ಭೂಮಿ ಇದ್ದವರು ಜಗತ್ತನ್ನು ಆಳುತ್ತಿದ್ದರು. ಇಂದು ಜ್ಞಾನ ಇದ್ದವರು ಜಗತ್ತನ್ನು ಆಳುತ್ತಿದ್ದಾರೆ. ನಾವು ಜ್ಞಾನದ ಶತಮಾನದಲ್ಲಿದ್ದೇವೆ. ಕರ್ನಾಟಕ ಮತ್ತು ಭಾರತಕ್ಕೆ ದೊಡ್ಡ ಭವಿಷ್ಯವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮೋದಿಯೊಂದಿಗೆ ಒಡನಾಟ: ಪ್ರಧಾನಮಂತ್ರಿ ನರೇಂದ್ರ ಮೋದಿ ಒಡನಾಟದ ಬಗ್ಗೆ ತಿಳಿಸುತ್ತಾ, ಮೋದಿಯವರ ಜೊತೆ ಯಾರಾದರೂ ಕೆಲ ಸಮಯ ಕಳೆದರೂ ಅವರ ಅಭಿಮಾನಿಯಾಗುತ್ತಾರೆ. ಮೋದಿಯವರಿಗೆ ಹೊಸತನ್ನು ಕಲಿಯುವ ಹಂಬಲವಿದೆ. ಎಲ್ಲವನ್ನೂ ಸಕಾರಾತ್ಮಕವಾಗಿಯೇ ನೋಡುವ ವ್ಯಕ್ತಿ. ಪರಿಪೂರ್ಣ ವ್ಯಕ್ತಿತ್ವವಿರುವ ವ್ಯಕ್ತಿ ಎಂದರೆ ಅದು ಮೋದಿ. ಅವರ ನೇತೃತ್ವದದಲ್ಲಿ ಭಾರತಕ್ಕೆ ಒಂದು ಸ್ಪಷ್ಟ ಗುರಿ ಸಿಕ್ಕಿದೆ ಎಂದು ಬೊಮ್ಮಾಯಿ ತಿಳಿಸಿದರು.
ಕೆ.ಎಲ್.ಇ ದಿನಗಳು: ಕೆ ಎಲ್ ಇ ವಿದ್ಯಾರ್ಥಿ ಸಮಯದ ಬಗ್ಗೆ ಮೆಲುಕು ಹಾಕಿ ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿ ನಾನು 40 ವರ್ಷದ ಹಿಂದಿನ ವಿದ್ಯಾರ್ಥಿ. ಈಗಲೂ ಕೂಡ ಕಾಲೇಜು ಕ್ಯಾಂಪಸ್ ಮಿಸ್ ಮಾಡಿಕೊಳ್ಳುತ್ತೇನೆ. ನಾವು ಓದುವಾಗ ಮೂರು ಶಾಖೆಗಳು ಮಾತ್ರವಿತ್ತು. ಉತ್ತಮ ಶಿಕ್ಷಕರು, ಇಷ್ಟದ ಶಿಕ್ಷಕರು, ಶಿಸ್ತಿನ ಶಿಕ್ಷಕರು ಕಾಲೇಜಿನಲ್ಲಿದ್ದರು ಎಂದರು.
ಭಾರತ ಪ್ರವಾಸದ ಅನುಭವ: ಕಾಲೇಜಿನ ದಿನಗಳಲ್ಲಿ ಕೈಗೊಂಡ ಭಾರತ ಪ್ರವಾಸದ ಅನುಭವಗಳನ್ನು ಮೆಲುಕು ಹಾಕಿದ ಪ್ರಾಂಶುಪಾಲರ ಅನುಮತಿಗಿಂತ ಮೊದಲೇ ಪ್ರವಾಸವನ್ನು ಆಯೋಜಿಸಿದ್ದೆವು. ಕಾಲೇಜಿನಲ್ಲಿ ಕ್ಯಾಂಟಿನ್ ನನ್ನ ನೆಚ್ಚಿನ ಸ್ಥಳವಾಗಿತ್ತು ಎಂದು ಸ್ಮರಿಸಿದರು.
ವಿದ್ಯಾರ್ಥಿಗಳು ಸಮಯ ಪಾಲಿಸಬೇಕು: ವಿದ್ಯಾರ್ಥಿಗಳಿಗೆ, ಯುವಕರಿಗೆ ಯಾವ ಸಲಹೆ ನೀಡುವಿರಿ ಎಂಬ ಪ್ರಶ್ನೆಗೆ ಉತ್ತರಿಸಿ, ಯುವಕರು ಸಮಯ ಎಲ್ಲಿ ವ್ಯರ್ಥ ಮಾಡುತ್ತಿದ್ದೀರಿ ಎಂದು ಯೋಚಿಸಬೇಕು. ವಿದ್ಯಾರ್ಥಿಗಳು ಅಧ್ಯಯನ ಮಾಡದೇ ಟಿವಿ, ಆಟಕ್ಕೆ ಸಮಯ ಕೊಟ್ಟು ಒತ್ತಡ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಸಮಯ ನಿರ್ವಹಣೆಯಿಂದ ಒತ್ತಡ ಕಡಿಮೆಯಾಗುತ್ತದೆ. ಸರಿಯಾಗಿ ಸಮಯಕ್ಕೆ ನಿದ್ರೆ ಮಾಡಬೇಕು, ಬೆಳಗ್ಗೆ ಹೊತ್ತು ವ್ಯಾಯಾಮ ಮಾಡಬೇಕು ಎಂದರು.
ಅವಶ್ಯಕತೆ ಇದ್ದಷ್ಟು ಮಾತ್ರ ಸಾಮಾಜಿಕ ಜಾಲತಾಣ ಬಳಸಿ: ಸಾಮಾಜಿಕ ಜಾಲತಾಣವನ್ನು ಅವಶ್ಯಕತೆ ಇದ್ದಷ್ಟು ಮಾತ್ರ ಬಳಸಿ. ನೀವು ನಿಮ್ಮದೇ ಆದ ಯೋಚನಾಶಕ್ತಿಯನ್ನು ಬಳಸಿಕೊಳ್ಳಬೇಕು. ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ, ನಂಬಿಕೆ ಇರಬೇಕು. ಆಗ ಖಂಡಿತ ಯಶಸ್ಸು ನಿಮ್ಮದಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯಶಸ್ಸು ವೈಯಕ್ತಿಕ: ನಿಮ್ಮ ಪ್ರಕಾರ ಯಶಸ್ಸು ಏನು, ನಿಮಗೆ ಸ್ಪೂರ್ತಿ ಯಾರು ಎಂದು ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿ ಯಶಸ್ಸು ಎನ್ನುವುದು ಪ್ರತಿಯೊಬ್ಬರ ವೈಯಕ್ತಿಕ. ಅಂದುಕೊಂಡಿದ್ದನ್ನು ಸಾಧಿಸಿದರೆ ಅದು ಯಶಸ್ಸು. ಆದರೆ, ಸಾಧನೆ ಅದಕ್ಕಿಂತ ದೊಡ್ಡದು. ಯಶಸ್ಸು ವೈಯಕ್ತಿಕವಾದರೆ, ಸಾಧನೆ ಸಮಾಜಕ್ಕೆ ಪೂರಕ ಎಂದರು.
ಆರೋಗ್ಯ ಇಲಾಖೆ ಸರಣಿ ಶಿಬಿರಗಳನ್ನು ಏರ್ಪಡಿಸುತ್ತದೆ : ಡೆಂಟಲ್ ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂದು ಪ್ರಶ್ನಿಸಿದ ವಿದ್ಯಾರ್ಥಿನಿಗೆ ಪ್ರತಿಕ್ರಿಯೆ ನೀಡಿ ಉತ್ತರ ಕರ್ನಾಟಕದ ಭಾಗದಲ್ಲಿ ತಂಬಾಕು ತಿನ್ನುವವರು ಹೆಚ್ಚಾಗಿದ್ದಾರೆ. ಆದ್ದರಿಂದ ಆರೋಗ್ಯ ಇಲಾಖೆ ಸರಣಿ ಶಿಬಿರಗಳನ್ನು ಮತ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತದೆ. ಯುವ ಡೆಂಟಲ್ ವಿದ್ಯಾರ್ಥಿಗಳನ್ನು ಸರ್ಕಾರದ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲಾಗುವುದು. ನಿಮ್ಮಿಂದ ಜನರಿಗೆ ಆರೋಗ್ಯದ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.
ಬೋರ್ಡ್ ಪರೀಕ್ಷೆಗಳನ್ನು ಮತ್ತಷ್ಟು ಡಿಜಿಟಲೀಕರಣಕ್ಕೆ ವಿದ್ಯಾರ್ಥಿನಿ ಮನವಿ: ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಡಿಜಿಟಲೀಕರಣ ತಲುಪಿಲ್ಲ. ಅದಾಗಲು ಇನ್ನೂ ಸಮಯ ಬೇಕಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತರಿಸಿದರು. ಟ್ಯಾಬ್, ಮೊಬೈಲ್ ಅನೇಕ ವ್ಯವಸ್ಥೆಗಳು ಮಕ್ಕಳ ಬಳಿ ಇಲ್ಲ. ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ ಹೆಚ್ಚಾಗಲಿದೆ. ಸರ್ಕಾರದಿಂದಲೇ ಶಿಕ್ಷಣ ಕಲಿಸುವ ತಂತ್ರಾಂಶ ಸಿದ್ದಪಡಿಸಲಾಗುತ್ತಿದೆ. ಬೈಜೂಸ್ ಮಾದರಿಯ ತಂತ್ರಾಂಶ ಸಿದ್ದಪಡಿಸಲಾಗುವುದು. ವ್ಯವಸ್ಥೆ ಡಿಜಿಟಲೈಸೇಶನ್‌ಗೆ ಸಂಪೂರ್ಣ ಸಿದ್ದವಾದಾಗ ಸರ್ಕಾರ ಆ ನಿಟ್ಟಿನಲ್ಲಿ ಕೂಡ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಓದಿ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಜಾರಿಗೆ ಕಸಾಪ ಅಧ್ಯಕ್ಷ ಜೋಶಿ ಆಗ್ರಹ