ಬೆಂಗಳೂರು: ನಾಳೆ ರಾತ್ರಿ 10ರಿಂದ ನೈಟ್ ಕರ್ಫ್ಯೂ ಆದೇಶ ಜಾರಿಯಾಗಲಿದೆ. ಇದು ಜನವರೆಗೂ ಮುಂದುವರಿಯಲಿದ್ದು, ಪ್ರತಿದಿನ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೂ ನಗರದಾದ್ಯಂತ ಜಾರಿಯಾಗುತ್ತಿದೆ. ಸರ್ಕಾರಿ ನಿಯಮಾನುಸಾರ ಕಠಿಣವಾದ 144 ಸೆಕ್ಷನ್ ಜಾರಿ ಮಾಡಿ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
![Police Commissioner Kamal Pant order](https://etvbharatimages.akamaized.net/etvbharat/prod-images/14026175_thumbjpg.jpg)
ಹೊಸ ವರ್ಷಾಚರಣೆ ಅವಧಿಯಲ್ಲಿ ಕಠಿಣ ನೈಟ್ ಕರ್ಫ್ಯೂ ಕಾಪಾಡಲು ಪೊಲೀಸರ ಸಿದ್ಧತೆ ಹಾಗೂ ಕರ್ಫ್ಯೂ ಅವಧಿಯಲ್ಲಿ ಅನುಮತಿ ನೀಡಲಾಗಿರುವ ಚಟುವಟಿಕೆಗಳ ಕುರಿತು ಪಂತ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಮುಖ್ಯವಾಗಿ ತುರ್ತು ಚಿಕಿತ್ಸೆ ಅಗತ್ಯವಿರುವವರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಪ್ರಯಾಣ ಕೈಗೊಳ್ಳಲು ಅವಕಾಶ ನೀಡಿದ್ದಾರೆ.
ರಾತ್ರಿ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ಕೈಗಾರಿಕಾ ಘಟಕಗಳ ಉದ್ಯೋಗಿಗಳಿಗೆ, ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಕಂಪನಿ ಸಿಬ್ಬಂದಿ, ಐಟಿ ಮತ್ತು ಅಗತ್ಯ ಸೇವಾ ಕಂಪನಿ ಕೆಲಸಗಾರರಿಗೆ, ಗೂಡ್ಸ್ ಹಾಗೂ ಹೋಮ್ ಡೆಲಿವರಿ ವಾಹನ/ಸಿಬ್ಬಂದಿ, ಸಾರ್ವಜನಿಕ ಸಾರಿಗೆ, ರೈಲು, ಮೆಟ್ರೋ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.
ಬಸ್, ರೈಲ್ವೆ ನಿಲ್ದಾಣ ಹಾಗೂ ಏರ್ಪೋರ್ಟ್ಗೆ ಸಂಚರಿಸುವ ವಾಹನಗಳಿಗೆ ಅನುಮತಿ ನೀಡಲಾಗಿದೆ. ಡಿಸೆಂಬರ್ 30ರಿಂದ ಹೋಟೆಲ್, ಪಬ್, ರೆಸ್ಟೋರೆಂಟ್ಗಳಲ್ಲಿ ಕೇವಲ ಶೇ.50 ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಿರುವ ಕುರಿತು ಉಲ್ಲೇಖಿಸಿದ್ದಾರೆ.
ಡಿಸೆಂಬರ್ 28 ರಿಂದ (ನಾಳೆ-ಮಂಗಳವಾರ) ಮದುವೆ, ಸಭೆ, ಸಮಾರಂಭಗಳಲ್ಲಿ 300 ಜನರಿಗಷ್ಟೇ ಅವಕಾಶ ನೀಡಲಾಗಿದ್ದು, ನಿಬಂಧನೆಗಳನ್ನು ಉಲ್ಲಂಘಿಸುವವರಿಗೆ ಎನ್ಡಿಎಂಎ ಹಾಗೂ ಕೆಪಿಡಿಎ ಕಾಯ್ದೆಯಡಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸರ್ಕಾರದ ನಿಯಮಗಳನ್ನು ನಮೂದಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಸಿಎಂ ಬದಲಾವಣೆ ಕೇವಲ ಊಹಾಪೋಹ: ಕಟೀಲ್ ಮತ್ತೊಮ್ಮೆ ಸ್ಪಷ್ಟನೆ