ಬೆಂಗಳೂರು: ಸಾಮಾಜಿಕ ಪಿಡುಗುಗಳು ಹಾಗೂ ದೇಶದ ಜ್ವಲಂತ ಸಮಸ್ಯೆಗಳ ವಿರುದ್ಧ ಜನಜಾಗೃತಿ ಅಭಿಯಾನ ಮಾಡುವುದು ಸರ್ವೇಸಾಮಾನ್ಯ. ಇದೀಗ ವಿಶ್ವದ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಸಾರ್ವಜನಿಕರಲ್ಲಿ ಬೆಂಗಳೂರು ಪೊಲೀಸರು ನೂತನ ಅಭಿಯಾನ ಕೈಗೊಂಡಿದ್ದಾರೆ.
ನಗರದ ನಾಗರಿಕರಿಗೆ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಅರೆಸ್ಟ್ ಕೊರೊನಾ ಎಂದು ಹ್ಯಾಷ್ ಟ್ಯಾಗ್ ಹೆಸರಿನಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಜಾಗೃತಿ ಮೂಡಿಸುವುದು ಅಭಿಯಾನದ ಆಶಯವಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಕೊರೊನಾ ವೈರಸ್ ಬಗ್ಗೆ ತುರ್ತು ಕೈಗೊಳ್ಳಬೇಕಾದ ಕ್ರಮಗಳು, ಏನು ಮಾಡಬೇಕು ಏನೆಲ್ಲಾ ಮಾಡಬಾರದು ಎಂಬುದರ ಕುರಿತಂತೆ ತಿಳುವಳಿಕೆ ಮೂಡಿಸಲು ಪೊಲೀಸರು ಮುಂದಾಗಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪ್ರೇರೇಪಿಸುವುದು, ಸ್ವಚ್ಛತೆ ಕಾಪಾಡುವುದು, ತಾತ್ಕಾಲಿಕ ತಂಪು ಪಾನೀಯ ನಿಷೇಧಿಸುವುದು, ಸೋಪ್ ಅಥವಾ ಸ್ಯಾನಿಟೈಜರ್ ಮೂಲಕ ಆಗಾಗ ಕೈಗಳನ್ನು ತೊಳೆಯಬೇಕು ಎಂಬುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ. ಅಲ್ಲದೆ, ನಮ್ಮ ಪೊಲೀಸರು ಸಹ ಹಸ್ತಲಾಘವ ಮಾಡದಂತೆ ತಾಕೀತು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.