ಬೆಂಗಳೂರು : ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ, ಆರ್. ಅಶೋಕ್, ಹಿರಿಯ ಶಾಸಕರಾದ ಸುರೇಶ್ ಕುಮಾರ್, ವಿ. ಸುನೀಲ್ ಕುಮಾರ್, ಮುನಿರತ್ನ, ಆರ್. ಅಶೋಕ್, ಅರವಿಂದ್ ಬೆಲ್ಲದ್, ಮಹೇಶ್ ಟೆಂಕಿನಕಾಯಿ, ಧೀರಜ್ ಮುನಿರಾಜು, ಚನ್ನಬಸಪ್ಪ, ಜ್ಯೋತಿ ಗಣೇಶ್, ಸಿ. ಕೆ ರಾಮಮೂರ್ತಿ ಸೇರಿದಂತೆ ಹಲವರು ಬಿಜೆಪಿ ಶಾಸಕರನ್ನು ವಶಕ್ಕೆ ಪಡೆದ ಪೊಲೀಸರು ಬಿಎಂಟಿಸಿ ಬಸ್ ಹಾಗೂ ಪೊಲೀಸರು ವ್ಯಾನ್ನಲ್ಲಿ ಕರೆದೊಯ್ದರು.
ಪ್ರತಿಭಟನಾ ಸ್ಥಳದಲ್ಲಿ ಒಂದು ರೀತಿಯ ಹೈಡ್ರಾಮವೇ ನಡೆದು ಹೋಯಿತು. ಇದಕ್ಕೂ ಮುನ್ನ ವಿಧಾನಸೌಧದ ಕೆಂಗಲ್ ಗೇಟ್ನ ಪಶ್ಚಿಮ ದ್ವಾರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಶಾಸಕರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಷ್ಟರಲ್ಲೇ ಸ್ಥಳಕ್ಕೆ ಬಂದ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕರು, ಬಿಜೆಪಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಸರ್ಕಾರ ಸರ್ವಾಧಿಕಾರಿ ರೀತಿ ವರ್ತಿಸುತ್ತಿದೆ: ರಾಜ್ಯ ಸರ್ಕಾರ ಸರ್ವಾಧಿಕಾರಿ, ಹಿಟ್ಲರ್ ರೀತಿ ವರ್ತಿಸುತ್ತಿದ್ದು, ಸ್ಪೀಕರ್ ಕುರ್ಚಿಯನ್ನೂ ದುರ್ಬಳಕೆ ಮಾಡಿಕೊಂಡು ಬಿಜೆಪಿ ಸದಸ್ಯರನ್ನು ಅಮಾನತು ಮಾಡಿದ್ದಾರೆ. ಇದೊಂದು ಕರಾಳ ದಿನವಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಧರಣಿ ನಿರತ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಸ್ಪೀಕರ್ ಕಚೇರಿ ಹಾಗೂ ವಿಧಾನಸೌಧದ ಪಶ್ಚಿಮ ದ್ವಾರದ ಮೆಟ್ಟಿಲುಗಳ ಮೇಲೆ ಬಿಜೆಪಿ, ಜೆಡಿಎಸ್ ಸದಸ್ಯರೊಂದಿಗೆ ಧರಣಿ ನಡೆಸಿದರು. ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಲೈ 17,18 ರಂದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ದಲ್ಲಿ ರಾಜ್ಯದ ಐಎಎಸ್ ಅಧಿಕಾರಿಗಳನ್ನು ಗುಮಾಸ್ತರನ್ನಾಗಿ ಮಾಡಿ ಪ್ರೊಟೊಕಾಲ್ ಇಲ್ಲದವರಿಗೂ ಪಿಎ ಥರಾ ಕೆಲಸ ಮಾಡುವಂತೆ ಮಾಡಿದ್ದಾರೆ. ಯಾರು ರಾಜ್ಯದ ಗೆಸ್ಟ್ ಅಂತಾ ಇರುತ್ತಾರೊ ಅವರಿಗೆ ಗೌರವ ಸಲ್ಲಿಸಲು ಪ್ರೊಟೊಕಾಲ್ ಅಧಿಕಾರಿಗಳು ಇದ್ದಾರೆ. ಅವರ ಬದಲು ಹಿರಿಯ ಐಎಎಸ್ ಅಧಿಕಾರಿಗಳಿಗೆ ರಾಜಕಾರಣಿಗಳನ್ನು ಬಾಗಿಲು ಕಾಯಲು ಹಚ್ಚಿದ್ದಾರೆ ಎಂದು ಸಿಟ್ಟು ಹೊರ ಹಾಕಿದರು.
ಸ್ಪೀಕರ್ ಕುರ್ಚಿಗೆ ಅವಮಾನವಾಗುವಂತೆ ನಡೆದುಕೊಳ್ಳುತ್ತಿದ್ದಾರೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪ್ರಜಾಪ್ರಭುತ್ವ ಕಗ್ಗೊಲೆ ಆಗಿದೆ. ಸ್ಫೀಕರ್ ಸ್ಥಾನ ದುರುಪಯೋಗ ಆಗಿದೆ. ಸ್ಪೀಕರ್ ಅವರು ಆಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ. ನಾವು ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲಿ ನಮ್ಮ ಸದಸ್ಯರಿಗೆ ಊಟಕ್ಕೂ ಬಿಡದೇ ಸದನ ನಡೆಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಹಿಟ್ಲರ್ ಶಾಹಿ ಆಡಳಿತ ನಡೆಸಿದ್ದಾರೆ. ಸ್ಪೀಕರ್ ಕಾಂಗ್ರೆಸ್ ನವರು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಸ್ಪೀಕರ್ ಕುರ್ಚಿಗೆ ಅವಮಾನವಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪೇಪರ್ ಹರಿದು ಹಾಕಿದ ಉದಾಹರಣೆ ಇದೆ. ಒಬ್ಬ ಸದಸ್ಯರು ಸ್ಪೀಕರ್ ಮುಂದಿನ ಮೈಕ್ ಕಿತ್ತು ಹಾಕಿದ ಉದಾಹರಣೆ ಇದೆ. ಸಿದ್ದರಾಮಯ್ಯ ಸದನದ ಬಾಗಿಲು ಒದ್ದು ಹೋಗಿರುವ ನಿದರ್ಶನ ಇದೆ. ಇವರು ಪ್ರತಿಪಕ್ಷದ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇವತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ಕರಾಳ ದಿನ. ಇದರ ವಿರುದ್ದ ನಾವು ಸದನದ ಹೊರಗೂ ಹೋರಾಟ ಮಾಡಿ ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ನವರೇ ಅವರಿಗೆ ಅವಮಾನ ಮಾಡಿದ್ದಾರೆ : ಇದೇ ವೇಳೆ ಉಪ ಸಭಾಧ್ಯಕ್ಷರಿಗೆ ಬಿಜೆಪಿ ಅವಮಾನ ಮಾಡಿದೆ ಎಂಬ ಕಾಂಗ್ರೆಸ್ ಪಕ್ಷದವರ ಆರೋಪದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದವರು ಉಪ ಸಭಾಧ್ಯಕ್ಷರಿಗೆ ಅವಮಾನ ಮಾಡಿದ್ದಾರೆ. ಸ್ಪೀಕರ್ ಸದನದ ಪರಿಸ್ಥಿತಿಯನ್ನು ನಿಭಾಯಿಸದೇ ಎದ್ದು ಹೋಗಿದ್ದಾರೆ. ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಯವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅವರನ್ನು ಉಪಸಭಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ನವರೇ ಅವರಿಗೆ ಅವಮಾನ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ರಾಜಕೀಯ ವ್ಯಕ್ತಿಗಳಿಗೆ ರಾಜ ಮರ್ಯಾದೆ ಕೊಟ್ಟಿರೋದು ಖಂಡನೀಯ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ