ಬೆಂಗಳೂರು: ನಗರದಲ್ಲಿ ಮನೆ ಮುಂದೆ ಇರುವ ದ್ವಿಚಕ್ರ ವಾಹನಗಳನ್ನ ಕಳ್ಳತನ ಮಾಡಿ ನೊಂದಣಿ ಸಂಖ್ಯೆ, ಇಂಜಿನ್ ನಂಬರ್ಗಳನ್ನು ಬದಲಿಸಿ ನಕಲಿ ನಂಬರ್ ಹಾಗೂ ಆರ್ಸಿ ಮಾಡುತ್ತಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಯ್ಯದ್ ತಬ್ರೇಜ್ ಪಾಷಾ ಬಂಧಿತ ಆರೋಪಿ. ಈತ 2010 ರಿಂದ ನಗರದಲ್ಲಿ ಹಲವಾರು ದ್ವಿಚಕ್ರ ವಾಹನಗಳನ್ನ ಕಳ್ಳತನ ಮಾಡಿ ನಂತರ ವಾಹನಗಳ ಮಾಲೀಕರು ಗುರುತು ಹಿಡಿಯದ ಹಾಗೆ ಬಣ್ಣ ಬಳಿದು ವಾಹನದ ಭಾಗಗಳನ್ನ ಬದಲಾವಣೆ ಮಾಡುತ್ತಿದ್ದ. ಬಳಿಕ ನಕಲಿ ನೋಂದಣಿ ಸಂಖ್ಯೆ ಹಾಕ್ತಿದ್ದ. ಹಾಗೆ ಆ ನಂಬರ್ಗೆ ಹೋಲುವ ಹಾಗೆ ನಕಲಿ ಆರ್.ಸಿ ಪುಸ್ತಕ ಸೃಷ್ಟಿ ಮಾಡಿಕೊಂಡು ಮಾರಾಟ ಮಾಡುತ್ತಿದ್ದ.
ಈ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗುತ್ತಿದ್ದ ಹಾಗೆ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಹೀಗಾಗಿ ಸಿಸಿಬಿ ಹೆಚ್ವುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿನ ಡಿಸಿಪಿ ಕುಲ್ ದೀಪ್ ಜೈನ್ ಅವರ ತಂಡ ಆರೋಪಿಯನ್ನ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಈತನ ಜೊತೆ ಇನ್ನಿಬ್ಬರು ಭಾಗಿಯಾಗಿದ್ದು, ಪ್ರಮುಖ ಆರೋಪಿ ಬಂಧಿತನಾಗ್ತಿದ್ದ ಹಾಗೆ ವೀಲರ್ ಷರೀಪ್ ಮತ್ತು ಕುಲ್ಮಿಮೌಲ ತಲೆಮರೆಸಿಕೊಂಡಿದ್ದಾರೆ. ಸದ್ಯ ಆರೋಪಿ ಮೇಲೆ ನಗರದ ಹಲವಾರು ಠಾಣೆಗಳಲ್ಲಿ ಗಾಡಿ ಕಳ್ಳತನ ಪ್ರಕರಣ ದಾಖಲಾಗಿದ್ದು, ವಾಹನಗಳ ಮಾಲೀಕರ ಪತ್ತೆ ಕಾರ್ಯ ಮುಂದುವರಿದಿದೆ.