ಬೆಂಗಳೂರು: ನಾಳೆಯಿಂದ ರಾಜ್ಯಾದ್ಯಂತ ಶಾಲಾ-ಕಾಲೇಜಿನಲ್ಲಿ ಭೌತಿಕ ತರಗತಿ ಆರಂಭವಾಗಲಿದ್ದು, ಅದಕ್ಕಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ನಗರದ ಶಾಲಾ-ಕಾಲೇಜುಗಳು ಮಕ್ಕಳ ಬರುವಿಕೆಗಾಗಿ ಕಾದಿದ್ದು, ಸ್ವಚ್ಛತಾ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರೆ.
ನಗರದ ಮಲ್ಲೇಶ್ವರಂನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೋಧನಾ ಕೊಠಡಿ, ಪ್ರಾಯೋಗಾಲಯಗಳು ಇನ್ನಿತರ ಸ್ಥಳವನ್ನ ಸ್ಯಾನಿಟೈಸ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಮೊದಲ ಹಂತವಾಗಿ 9,10,11 ಮತ್ತು 12ನೇ ತರಗತಿಯನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೀಗಾಗಿ ‘ಬನ್ನಿ ಮಕ್ಕಳೇ ಮರಳಿ ಶಾಲೆಗೆ, ನಿಮ್ಮ ಸುರಕ್ಷತೆ ಜವಾಬ್ದಾರಿ ನಮ್ಮದು’ ಅಂತ ಟ್ಯಾಗ್ ಲೈನ್ ಮೂಲಕ ಭರವಸೆ ಮೂಡಿಸಲಾಗುತ್ತಿದೆ.
ಶಾಲೆಗಳ ಆರಂಭಕ್ಕೆ ಇರುವ ಗೈಡ್ ಲೈನ್ಸ್ ಏನು..
- ಶಾಲೆಯಲ್ಲಿ ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದರೆ ಒಂದು ವಾರ ಶಾಲೆ ಸೀಲ್ ಡೌನ್
- ಎರಡಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ಶಾಲೆಗಳು ಬಂದ್
- ಕೊರೊನಾ ಲಕ್ಷಣ ಕಂಡುಬರುವ ಮಗುವಿಗೆ ಶಾಲೆಯ ಪ್ರವೇಶ ಇರುವುದಿಲ್ಲ
- ಶಾಲಾ-ಕಾಲೇಜುಗಳಲ್ಲಿ ಕಡ್ಡಾಯ ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕು
- ಶಿಕ್ಷಕರಿಗೆ ಹಾಗೂ ಶಾಲಾ ಸಿಬ್ಬಂದಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿರಬೇಕು
- ತರಗತಿ ಹಾಜರಾತಿಗೆ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು
- ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಇಲ್ಲ. ಆನ್ಲೈನ್ ಹಾಗೂ ಆಫ್ಲೈನ್ ತರಗತಿಗೆ ಅವಕಾಶ
- ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶ
- ವಸತಿ ಶಾಲೆಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ 72 ಗಂಟೆಗಳ ಒಳಗಿನ ನೆಗಟಿವ್ ರಿಪೋರ್ಟ್ ಸಲ್ಲಿಸಬೇಕು
- ಶಾಲೆಗಳು ಇಡೀ ಆವರಣವನ್ನು ಸ್ಯಾನಿಟೈಸ್ ಮಾಡಬೇಕು, ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು
- ಶೌಚಾಲಯ, ಶಾಲೆಯ ಕೊಠಡಿ, ಅಡುಗೆ ದಾಸ್ತಾನು ಎಲ್ಲವನ್ನೂ ಸ್ವಚ್ಛಗೊಳಿಸಬೇಕು.
ಐಡಿ ಕಾರ್ಡ್ ತೋರಿಸಿದ್ರೆ ಉಚಿತ ಪ್ರಯಾಣ
ವಿದ್ಯಾರ್ಥಿಗಳು ಶಾಲಾವಧಿಯಲ್ಲಿ ಹಳೆಯ ಸ್ಮಾರ್ಟ್ ಕಾರ್ಡ್ ಪಾಸ್ನಲ್ಲೇ ಓಡಾಡಬಹುದು. ಪಾಸ್ ಇಲ್ಲದೇ ಇರುವವರು, ಶಾಲಾ-ಕಾಲೇಜಿನ ಐಡಿ ಕಾರ್ಡ್ ಅಥವಾ ಶುಲ್ಕದ ರಸೀದಿ ತೋರಿಸಿ ಸಂಚರಿಸಬಹುದಾಗಿದೆ. ಸರ್ಕಾರದ ಮುಂದಿನ ಆದೇಶವರೆಗೆ ವಿದ್ಯಾರ್ಥಿಗಳ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶಾಲಾರಂಭಕ್ಕೆ ಸಾಕ್ಷಿಯಾಗಲಿರುವ ಸಿಎಂ ಬಸವರಾಜ ಬೊಮ್ಮಾಯಿ
ನಾಳೆಯಿಂದ ಶಾಲಾರಂಭ ಹಿನ್ನೆಲೆ ಶಾಲಾ-ಕಾಲೇಜಿಗೆ ಭೇಟಿ ನೀಡಲಿದ್ದಾರೆ. ಮಲ್ಲೇಶ್ವರಂನ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ನಿರ್ಮಲಾರಾಣಿ ಅನುದಾನಿತ ಪ್ರೌಢ ಶಾಲೆಗೆ ಭೇಟಿ ನೀಡಲಿದ್ದಾರೆ.