ಬೆಂಗಳೂರು: ಕೇಂದ್ರ ಸರ್ಕಾರದ ಆದೇಶದಂತೆ ನಗರದಲ್ಲಿರುವ ಎಂಟು ಕಚೇರಿಗಳ ಪೈಕಿ ನಾಲ್ಕು ಪಿಎಫ್ಐ ಕಚೇರಿ ಹಾಗೂ ಅದರ ಅಂಗಸಂಸ್ಥೆಗಳಿಗೆ ನಗರ ಪೊಲೀಸರು ಬೀಗಮುದ್ರೆ ಹಾಕಿದ್ದಾರೆ. ಬುಧವಾರ ಮಂಗಳೂರು ಸೇರಿದಂತೆ ಹಲವು ಭಾಗದಲ್ಲಿ ನಿಷೇಧಿತ ಪಿಎಫ್ಐ ಹಾಗೂ ಅಂಗಸಂಸ್ಥೆಗಳ ಕಚೇರಿಗಳಿಗೆ ಬೀಗ ಜಡಿದು ಅಧಿಕೃತವಾಗಿ ಮುದ್ರೆ ಒತ್ತಿದ್ದರು.
ಅದರಂತೆ ಗುರುವಾರ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಹಲಸೂರು ಗೇಟ್, ಹೈಗ್ರೌಂಡ್, ಹೆಬ್ಬಾಳ, ಜೆ.ಸಿ.ನಗರ ಪೊಲೀಸ್ ಪಿಎಫ್ಐ ಹಾಗೂ ಸಿಎಫ್ಐ ಕಚೇರಿಗಳನ್ನ ಲಾಕ್ ಮಾಡಿ ಸೀಲ್ ಮಾಡುವಂತಹ ಕೆಲಸ ಮಾಡಲಾಯಿತು. ಪಿಎಫ್ಐ ಹಾಗೂ ಸಿಎಫ್ಐ ಕಚೇರಿಗಳಿಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೊರಡಿಸಿರುವ ಆದೇಶದ ಪ್ರತಿಯನ್ನ ಕಚೇರಿಯ ಬಾಗಿಲಿಗೆ ಸೀಲ್ ಹಾಕಿ, ಗೋಡೆಯ ಮೇಲೆ ಪ್ರತಿಯನ್ನ ಪೊಲೀಸರು ಅಂಟಿಸಿದರು.
ಸರ್ಕಾರಿ ಪಂಚರ ಸಮಕ್ಷಮದಲ್ಲೇ ಬೀಗ: ಜೆ.ಸಿ.ನಗರದ ಬೆನ್ಸನ್ ಟೌನ್ನ ಪಿಎಫ್ಐ ಕೇಂದ್ರ ಕಚೇರಿ ಸೇರಿದಂತೆ ನಗರದ ನಾನಾ ಕಡೆಯಲ್ಲಿ ಕಚೇರಿಯನ್ನ ಸಿಲ್ ಮಾಡಲಾಯಿತು. ಸೀಲ್ ಮಾಡುವ ಮುನ್ನ ಪೊಲೀಸರು ಇಬ್ಬರು ಸರ್ಕಾರಿ ಪಂಚರನ್ನ ಕರೆತಂದು ಕಚೇರಿಯಲ್ಲಿರುವ ಪೀಠೋಪಕರಣಗಳಿಂದ ಹಿಡಿದು ದಾಖಲೆಗಳ ಮಾಹಿತಿ ಪಟ್ಟಿಮಾಡಿ ಲಿಖಿತ ರೂಪದಲ್ಲಿ ಬರೆಯುವಂತಹ ಕೆಲಸವನ್ನ ಮಾಡಿದರು. ಅದಾದ ಬಳಿಕ ಸರ್ಕಾರಿ ಪಂಚರಗಳ ಸಹಿಯನ್ನ ಲಿಖಿತ ರೂಪದ ಪತ್ರಕ್ಕೆ ಸಹಿ ಹಾಕಿಸಿದರು.
ಇದನ್ನೂ ಓದಿ: ಪಿಎಫ್ಐ ನಿಷೇಧ: ಮಂಗಳೂರು ಜಿಲ್ಲಾ ಕಚೇರಿಗೆ ಬೀಗಮುದ್ರೆ ಹಾಕಿದ ಪೊಲೀಸರು
ಸದ್ಯ ಕೇವಲ ನಾಲ್ಕು ಪಿಎಫ್ಐ ಹಾಗೂ ಅದರ ಅಂಗಸಂಸ್ಥೆಗಳಿಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ. ಇನ್ನುಳಿದ ನಾಲ್ಕು ಕಚೇರಿಗಳನ್ನ ಗುರುತಿಸಿ, ನಂತರ ಸ್ಥಳಪರಿಶೀಲನೆಯ ಬಳಿಕ ಸೀಲ್ ಒತ್ತು ಕಾರ್ಯ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಪಿಎಫ್ಐ ಕಚೇರಿ ಸೀಜ್: ನಿಷೇಧಿತ ಪಿಎಫ್ಐ ಕಚೇರಿಯನ್ನ ಬೆಳಗಾವಿಯಲ್ಲಿ ಸೀಜ್ ಮಾಡಲಾಗಿದೆ. ಇಲ್ಲಿನ ಸುಭಾಷ್ ನಗರದಲ್ಲಿರುವ ನಿಷೇಧಿತ ಪಿಎಫ್ಐ ಕಚೇರಿ ಸೀಜ್ ಮಾಡಲಾಗಿದ್ದು, ಬೆಳಗಾವಿ ಮಾರ್ಕೆಟ್ ಎಸಿಪಿ ನಾರಾಯಣ ಭರಮಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಚೇರಿಯನ್ನು ಸೀಜ್ ಮಾಡಿದ್ದಾರೆ. ಸುಭಾಷ್ ನಗರದಲ್ಲಿ ಬಾಡಿಗೆ ಮನೆ ಪಡೆದುಕೊಂಡು ಅದನ್ನೇ ಪಿಎಫ್ಐ ಕಚೇರಿ ಮಾಡಿಕೊಂಡಿದ್ದರು. ಮಾರ್ಕೆಟ್ ವಿಭಾಗದ ಪೊಲೀಸರಿಂದ ಪಿಎಫ್ಐ ಕಚೇರಿಯನ್ನು ಸೀಜ್ ಮಾಡಿದ್ದಾರೆ.