ಬೆಂಗಳೂರು: ಭತ್ತದ ಬೆಳೆಗೆ ಕಾಡುತ್ತಿರುವ ಕಂದು ಜಿಗಿಹುಳುವಿನ ಹತೋಟಿಗಾಗಿ ಪೆಸ್ಟಿಸೈಡ್ ಇಂಡಿಯಾ ಕಂಪನಿ ಜಪಾನ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿರುವ ಹೊಸ ಉತ್ಪನ್ನ ಡಿಸ್ಟ್ರಪ್ಟರ್ ಅನ್ನು ಗುರುವಾರ ಕರ್ನಾಟಕದಲ್ಲಿ ಬಿಡುಗಡೆ ಮಾಡಿದೆ. ದೇಶದಲ್ಲಿ ಈ ರೀತಿಯ ಆವಿಷ್ಕಾರದ ಮೊದಲ ಉತ್ಪನ್ನ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಪೆಸ್ಟಿಸೈಡ್ ಇಂಡಿಯಾ ಉತ್ಪನ್ನಗಳ ಅಧಿಕೃತ ಮಾರಾಟಗಾರರನ್ನು ಆಹ್ವಾನಿಸಿ ಹೊಸ ಉತ್ಪನ್ನ ಡಿಸ್ಟ್ರಪ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಕಳೆದ ವಾರ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಡಿಸ್ಟ್ರಪ್ಟರ್ ಬಿಡುಗಡೆಯಾಗಿದ್ದು, ಮುಂದಿನ ವಾರ ಪಶ್ಚಿಮ ಬಂಗಾಳ ಮತ್ತು ಛತ್ತೀಸ್ಗಢದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿ ಪ್ರಕಟಿಸಿದೆ.
ಹೊಸ ಉತ್ಪನ್ನ ಬಿಡುಗಡೆಗೊಳಿಸಿದ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪೆಸ್ಟಿಸೈಡ್ ಕಂಪನಿ ಸಿಇಒ ಪ್ರಶಾಂತ್ ಹೆಗಡೆ, ಹೊಸ ಉತ್ಪನ್ನ ಬಿಡುಗಡೆ ಮಾಡುತ್ತಿದ್ದೇವೆ. ಭತ್ತದ ಬೆಳೆಯಲ್ಲಿ ರಸ ಹೀರುವ ಕೀಟ ಕಂದು ಜಿಗಿಹುಳು ನಿಯಂತ್ರಣಕ್ಕೆ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಆರೋಗ್ಯಕರ ಬೆಳೆ ಬರಲು ಸಹಕಾರಿಯಾಗುವ ಜೊತೆಗೆ ಕಂದು ಜಿಗಿಹುಳು ಮೊಟ್ಟೆ ಇಡುವುದನ್ನು ನಿಯಂತ್ರಣ ಮಾಡಲಿದೆ ಎಂದರು.
ಕರ್ನಾಟಕದಲ್ಲಿ ಗುರುವಾರ ಬಿಡುಗಡೆಯಾದ ಉತ್ಪನ್ನವನ್ನ, ಇಂಡಿಯಾ ಜಪಾನ್ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದೇ ಮೊದಲ ಬಾರಿ ಆಧುನಿಕ ಆವಿಷ್ಕಾರ ಆಧಾರಿತ ಎಕ್ಸ್ ಪಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಡಿಸ್ಟ್ರಪ್ಟರ್ ಸ್ಪರ್ಶ, ಅಂತರ್ ವ್ಯಾಪಿ, ಟ್ರಾನ್ಸ್ ಲ್ಯಾಮಿನಾರ್ ಗುಣಗಳನ್ನು ಹೊಂದಿದೆ. ಈ ರೀತಿ ಅಭಿವೃದ್ಧಿ ಪಡಿಸಿರುವುದು ನಾವೇ ಮೊದಲು, ಮೂರು ವರ್ಷದಿಂದ ಪ್ರಯೋಗ ನಡೆಸಿದ್ದೇವೆ. ಈ ಉತ್ಪನ್ನ ಬಳಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ಇಳುವರಿ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದರು.
ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾಗಿ ನಾವು ಉತ್ಪನ್ನ ಆವಿಷ್ಕಾರ ಮಾಡಿಲ್ಲ. ದೇಶದಲ್ಲಿ ಎಲ್ಲೆಲ್ಲಿ ಭತ್ತ ಬೆಳೆಯುತ್ತಾರೋ ಅಲ್ಲೆಲ್ಲಾ ಪ್ರಯೋಗ ಮಾಡಿಯೇ ಉತ್ಪನ್ನ ಬಿಡುಗಡೆ ಮಾಡಲಾಗಿದೆ. ಹಾಗಾಗಿ ದೇಶಾದ್ಯಂತ ಎಲ್ಲಿ ಬೇಕಾದರೂ ನಮ್ಮ ಡಿಸ್ಟ್ರಪ್ಟರ್ ಉತ್ಪನ್ನ ಬಳಕೆ ಮಾಡಬಹುದಾಗಿದೆ. ರೈತರು ಈ ವಿಚಾರದಲ್ಲಿ ಯಾವುದೇ ಗೊಂದಲ ಇರಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ಇಂದು ಒಂದು ಉತ್ಪನ್ನ ಬಿಡುಗಡೆ ಮಾಡುತ್ತಿದ್ದೇವೆ. ಮುಂದಿನ ವರ್ಷ 11 ಉತ್ಪನ್ನ ಬಿಡುಗಡೆ ಮಾಡಲಿದ್ದೇವೆ. ಅದರಲ್ಲಿ 6 ಉತ್ಪನ್ನ ಸಂಪೂರ್ಣ ಹೊಸತಾಗಿರಲಿದೆ. ಈವರೆಗೂ ಯಾರೂ ಅಂತಹ ಉತ್ಪನ್ನ ಬಿಡುಗಡೆ ಮಾಡಿಲ್ಲ. ಹತ್ತಿ, ಭತ್ತ, ತರಕಾರಿ, ಮೆಣಸು ಮೇಲೆ ಬಳಕೆ ಮಾಡಬಹುದಾದ ಉತ್ಪನ್ನ ಬಿಡುಗಡೆ ಮಾಡಲಿದ್ದೇವೆ. ಏಪ್ರಿಲ್, ಮೇ ತಿಂಗಳಲ್ಲಿ ಕೆಲ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತೇವೆ ಎಂದರು.
ನಮ್ಮ ಕಂಪನಿಗೂ ಕೋವಿಡ್ ಪರಿಣಾಮದ ಬಿಸಿ ತಟ್ಟಿದೆ. ನಮ್ಮ ಸಿಬ್ಬಂದಿ ಕೋವಿಡ್ ಪಾಸಿಟಿವ್ಗೆ ಸಿಲುಕಿದ್ದರು. ಉತ್ಪಾದನಾ ಘಟಕಗಳಿಗೆ ಉದ್ಯೋಗಿಗಳು ಬಾರದೆ ಉತ್ಪಾದನೆ ಕುಂಠಿತವಾಯಿತು. ಮೊದಲ ಮತ್ತು ಎರಡನೇ ಅಲೆ ಹೆಚ್ಚು ಹಾನಿಯಾಯಿತು. ಮೂರನೇ ಅಲೆಯಲ್ಲಿ ಅದರ ಪ್ರಮಾಣ ಕಡಿಮೆಯಾಗಿದೆ. ಆದರೂ ನಾವು ಸುಧಾರಿಸಿಕೊಂಡು ಮುನ್ನಡೆಯಬೇಕಿದೆ ಎಂದರು.
ಸಮಾರಂಭದಲ್ಲಿ ಮಾರುಕಟ್ಟೆ ಮುಖ್ಯಸ್ಥ ದುಷ್ಯಂತ್ ಸೂದ್, ಪ್ರಧಾನ ವಾಣಿಜ್ಯ ಅಧಿಕಾರಿ ಗೌರವ ಕಾಟೆಯಾಲ್, ಕ್ಲಸ್ಟರ್ ಹೆಡ್ ಎಂ.ಎಸ್. ನಾಯ್ಕು ಹಾಗೂ ಭತ್ತದ ಬೆಳೆ ವ್ಯವಸ್ಥಾಪಕ ದೇವೇಂದ್ರ ಬಾಬು, ಮಾರಾಟ ವ್ಯವಸ್ಥಾಪಕ ರಮೇಶ್ ಉಪಸ್ಥಿತರಿದ್ದರು.