ಬೆಂಗಳೂರು: ನನ್ನ ಹತ್ಯೆಗೆ ಪ್ರಚೋದಿಸಿದವವರನ್ನು ಹುಡುಕಲು ಕಷ್ಟವೇನಿಲ್ಲ. ಆತ ಪ್ರಧಾನಿ ಪಕ್ಕದಲ್ಲಿಯೇ ಇದ್ದಾರೆ. ಹೀಗಿದ್ದೂ ಪೊಲೀಸರು ಇನ್ನೂ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ರಾಜ್ಯಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು, ನನ್ನನ್ನು ಹೊಡೆದು ಹಾಕಬೇಕು ಎಂದು ಹತ್ಯೆಗೆ ಪ್ರಚೋದಿಸಿದ್ದ ಸಚಿವ ಡಾ.ಅಶ್ವಥ್ ನಾರಾಯಣ್ ಅವರಿಗೆ ತಲೆಗೆ ಕುಟ್ಟಿ ಬುದ್ದಿ ಹೇಳಬಹುದು ಎಂದು ಅಂದ್ಕೊಂಡಿದ್ದೆ. ಆದರೆ ಸಾಹೇಬರು ಕಲ್ಪಿತ ಬೆದರಿಕೆಯನ್ನು ಮುಂದೊಡ್ಡಿ ತಾವೇ ಅನುಕಂಪಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ಇದ್ಯಾವ ಹೊಸ ಗಿಮಿಕ್ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ನವರು ನನಗೆ ಮರ್ ಜಾ ಮೋದಿ ಎಂದು ರಾಜ್ಯದಲ್ಲಿ ಘೋಷಣೆ ಕೂಗುತ್ತಿದ್ದಾರೆ ಎಂದು ಮೋದಿ ತಮ್ಮ ಸ್ವಭಾವ ಸಹಜ ಸುಳ್ಳು ಹೇಳಿದ್ದಾರೆ. ಆ ರೀತಿ, ಎಲ್ಲಿ ಯಾರು ಕೂಗಿದ್ದರು ಎನ್ನುವುದನ್ನು ಮೋದಿಯವರು ಬಹಿರಂಗ ಪಡಿಸಬೇಕು. ಕೇಂದ್ರ ಮತ್ತು ರಾಜ್ಯದಲ್ಲಿರುವುದು ಬಿಜೆಪಿಯದ್ದೇ ಸರ್ಕಾರ ಅಲ್ಲವೇ? ಆ ರೀತಿ ಘೋಷಣೆ ಕೂಗಿದವರನ್ನು ಎಳೆದು ತಂದು ದೇಶದ ಮುಂದೆ ನಿಲ್ಲಿಸಿ ಎಂದು ಕಿಡಿ ಕಾರಿದ್ದಾರೆ.
ನಾನು ಬದುಕಿರುವವರೆಗೆ ಕಾಂಗ್ರೆಸ್ ಏನೂ ಮಾಡಲು ಸಾಧ್ಯವಿಲ್ಲ ಎಂಬ ನರೇಂದ್ರ ಮೋದಿ ಅವರ ಆತ್ಮರತಿಯ ಮಾತುಗಳನ್ನು ಕೇಳಿ ನಗುಬರುತ್ತಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅವರೇ ಪ್ರಧಾನಿಯಾಗಿ ಬಂದು ವ್ಯಾಪಕ ಪ್ರಚಾರ ನಡೆಸಿದರೂ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿರಲಿಲ್ಲ, ಮುಂದೆಯೂ ಬರುವುದಿಲ್ಲ. ನಾಲ್ಕು ದಿನಕ್ಕೊಮ್ಮೆ ರಾಜ್ಯಕ್ಕೆ ಹಾರಿ ಬರುತ್ತಿರುವ ಮೋದಿಯವರ ಹತಾಶೆಯಲ್ಲಿಯೇ ಸೋಲಿನ ಸೂಚನೆ ಇದೆ ಎಂದಿದ್ದಾರೆ.
ಕರ್ನಾಟಕದ ನಾಯಕರಿಗೆ ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ಕಣ್ಣೀರು ಹಾಕಿದ ಪ್ರಧಾನಿಯನ್ನು ಕಂಡು ನಾನು ಚಕಿತನಾದೆ. ಅವರಿಗೇನಾದರೂ ಆತ್ಮಸಾಕ್ಷಿ ಇದೆಯೇ? ರಾಜಕೀಯವಾಗಿ ತನಗೆ ಜೀವದಾನ ಮಾಡಿದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರನ್ನು ಅವಮಾನಿಸಿ ಮಾರ್ಗದರ್ಶಕ ಮಂಡಳಿಗೆ ತಳ್ಳಿದ್ದು ಯಾರು ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
ಬಿಜೆಪಿಯಲ್ಲಿಯೇ ನರೇಂದ್ರ ಮೋದಿಯವರ ಕಡೆಗಣಿಸಿದ ನಾಯಕರು ಒಬ್ಬರು, ಇಬ್ಬರೇ? ಹೆಸರುಗಳ ಪಟ್ಟಿ ಉದ್ದ ಇದೆ. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ. ಮುರಳಿ ಮನೋಹರ ಜೋಷಿ, ಜಸ್ವಂತ್ ಸಿಂಗ್ ಮೊದಲಾದ ಹಿರಿಯರನ್ನು ಮೋದಿಯವರು ಹೇಗೆ ನಡೆಸಿಕೊಂಡಿದ್ದಾರೆ ಎನ್ನುವುದನ್ನು ಇಡೀ ದೇಶ ನೋಡಿದೆ. ತಮ್ಮದೇ ರಾಜ್ಯದ ಹಿರಿಯ ಬಿಜೆಪಿ ನಾಯಕ ಕೇಶುಭಾಯಿ ಪಟೇಲ್ ಅವರಿಗೆ ಮೋದಿಯವರು ಮಾಡಿದ್ದ ಅವಮಾನ ಏನು ಕಡಿಮೆಯೇ?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಜೈಲಿಗೆ ಹೋಗಿದ್ದು ಎನ್ನುವುದು ನೆನಪಿರಲಿ. ಕೊನೆಗೆ ಅವರು ಪಕ್ಷವನ್ನೇ ಬಿಟ್ಟುಹೋಗುವಂತೆ ಮಾಡಿದ್ದು ಯಾರು ? ಪಕ್ಷ ತೊರೆದು ಹೋದ ಅವರನ್ನು ತುಚ್ಚೀಕರಿಸಿ ಹಿಂಸಿಸಿದ್ದು ಯಾರು? ನಿಮ್ಮದೇ ಶಿಷ್ಯರಲ್ಲವೇ ಮೋದಿಯವರೇ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಬಲಾತ್ಕಾರವಾಗಿ ಕಿತ್ತು ಹಾಕಿ ಅವರು ಸಾರ್ವಜನಿಕವಾಗಿ ಕಣ್ಣೀರು ಹಾಕುವಂತೆ ಮಾಡಿದ್ದು ಯಾರು? ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ ಮೇಲೆ ಓಡಿಬಂದು ಅವರನ್ನು ಹಾಡಿ ಹೊಗಳುತ್ತಿರುವ ಮೋದಿಯವರು ಯಡಿಯೂರಪ್ಪನವರು ಕಣ್ಣೀರು ಹಾಕಿದಾಗ ಎಲ್ಲಿ ಅಡಗಿ ಕೂತಿದ್ದರು?
ಕರ್ನಾಟಕದ ನಾಯಕರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ಗೋಳಾಡುತ್ತಿರುವ ನರೇಂದ್ರ ಮೋದಿಯವರು ನಿನ್ನೆಯ ಸಾರ್ವಜನಿಕ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಯವರ ಅವರ ಹೆಸರನ್ನೇ ಹೇಳದೆ ಸಾರ್ವಜನಿಕವಾಗಿ ಅವಮಾನಿಸಿದ್ದು ಸರಿಯೇ? ಅವರು ಬಿಜೆಪಿಗೆ ಸೇರಿರುವವರಾಗಿರಬಹುದು, ಆದರೆ ಅವರು ರಾಜ್ಯಕ್ಕೆ ಮುಖ್ಯಮಂತ್ರಿ. ಕರ್ನಾಟಕದ ನಾಯಕರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಅನುಕಂಪ ತೋರುತ್ತಿರುವ ಪ್ರಧಾನಿ ಮೋದಿಯವರು ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿಯ 25 ಸಂಸದರನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂದು ಅವರನ್ನೇ ಕೇಳಬೇಕು ಎಂದರು.
ಅವರೇನು ಕರ್ನಾಟಕದವರಲ್ಲವೇ? ಮೋದಿಯವರು ಅವರನ್ನು ಎಂದಾದರೂ ತಮ್ಮೆದುರು ತಲೆ ಎತ್ತಿ ಮಾತನಾಡಲು ಬಿಟ್ಟಿದ್ದರಾ? ಬೆತ್ತ ಹಿಡಿದ ಶಿಕ್ಷಕನ ಎದುರು ವಿದ್ಯಾರ್ಥಿಗಳಂತೆ ಅವರನ್ನು ನಡುಗುವುದನ್ನು ದೇಶ ಕಂಡಿದೆ. ನರೇಂದ್ರ ಮೋದಿಯವರು ಮತ್ತೆ ಮತ್ತೆ ಕರ್ನಾಟಕಕ್ಕೆ ಬರುತ್ತಿರುವುದು ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಗೋ? ಚುನಾವಣಾ ಪ್ರಚಾರಕ್ಕೋ? ಇಲ್ಲವೇ ಸುಳ್ಳು ಹೇಳುವ ಸ್ಪರ್ಧೆಯಲ್ಲಿ ರಾಜ್ಯದ ನಾಯಕರ ಜೊತೆ ಪೈಪೋಟಿ ನಡೆಸುವುದಕ್ಕೋ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನರೇಂದ್ರ ಮೋದಿಯವರು ಎಷ್ಟೇ ಸುಳ್ಳು ಹೇಳಿಕೊಂಡು ಪ್ರಚಾರ ನಡೆಸಿದರೂ ಸತ್ಯಕ್ಕೆ ಜಯ ಖಂಡಿತ. ಅರಸನ ಮೈಮೇಲಿನ ಬಟ್ಟೆಗಳು ಒಂದೊಂದಾಗಿ ಕಳಚಿ ಬೀಳುತ್ತಿದೆ ಎಂದು ವಿವರಿಸಿದ್ದಾರೆ.
ಇದನ್ನೂಓದಿ: ಕನಕಪುರದಲ್ಲಿ ತಯಾರಾದ ಕುಕ್ಕರ್ಗಳು ಡುಬ್ಲಿಕೇಟು, ಬ್ಲಾಸ್ಟ್ ಆಗುತ್ತವೆ ಎಚ್ಚರಿಕೆಯಿಂದಿರಿ: ರಮೇಶ್ ಜಾರಕಿಹೊಳಿ