ಬೆಂಗಳೂರು: ಪೊಲೀಸ್ ಮಾಹಿತಿದಾರನ ಸೋಗಿನಲ್ಲಿ ನಗರದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುವ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿ ಪೊಲೀಸರಿಂದ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಹೊಸಗುಡ್ಡಹಳ್ಳಿಯ ಗೋರಿಪಾಳ್ಯದ ವಸೀಂ ಬಂಧಿತ ಆರೋಪಿ.
ಆಟೋ ಚಾಲಕನಾಗಿದ್ದ ವಸೀಂ ಪೊಲೀಸರಿಗೆ ಕರೆ ಮಾಡಿ ತನಗೆ ನಗರದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿಯಿದೆ ಎಂದು ಪೊಲೀಸರಿಂದ ಒಂದೆರಡು ಸಾವಿರ ರೂಪಾಯಿ ಹಣ ಪಡೆಯುತ್ತಿದ್ದ. ದುಡ್ಡು ಕೈ ಸೇರುತ್ತಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದ. ಇತ್ತೀಚೆಗೆ ಸಿಸಿಬಿ ಕಾನ್‌ಸ್ಟೆಬಲ್ ಒಬ್ಬರಿಗೆ ಕರೆ ಮಾಡಿ ಇರಾನಿ ಗ್ಯಾಂಗ್ ಸದಸ್ಯನೋರ್ವ ಕಾಟನ್‌ಪೇಟೆಯಲ್ಲಿ ರೂಮ್ ಬುಕ್ ಮಾಡಿದ್ದಾನೆ. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದ. ಪ್ರತಿಯಾಗಿ ಡೀಸೆಲ್ ಖರ್ಚಿಗೆ ಒಂದು ಸಾವಿರ ರೂಪಾಯಿ ಹಣ ಹಾಕಿಸಿಕೊಂಡು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಅನುಮಾನದಿಂದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಂಚನೆ ಕೃತ್ಯ ಬಯಲಾಗಿದೆ. ನಗರದ ವಿವಿಧ ಪೊಲೀಸ್ ಠಾಣೆಯ ಪೊಲೀಸರಿಗೂ ಕರೆ ಮಾಡಿ ಆರೋಪಿ ಹಣ ಪಡೆದುಕೊಂಡಿದ್ದಾನೆ. ಬಂದ ಹಣದಲ್ಲಿ ಸಣ್ಣ ಮೊತ್ತವನ್ನು ಬೈಕ್ ಸಾಲ ಕಟ್ಟಿದರೆ ಇನ್ನುಳಿದ ಹಣವನ್ನು ಮದ್ಯಪಾನಕ್ಕಾಗಿ ವಿನಿಯೋಗಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ದುಡ್ಡಿನಲ್ಲಿ ಮೋಜು ಮಸ್ತಿ: ಕಳೆದ ನಾಲ್ಕು ವರ್ಷದಿಂದ ಪೊಲೀಸರಿಗೆ ವಂಚಿಸಿ ಪಬ್ ಬಾರ್‌ಗಳಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ವಸೀಂ, ಈ ಪ್ರದೇಶದಲ್ಲಿ ದಂಧೆ ನಡೆಯುತ್ತಿದೆ, ನಾನು ಅಲ್ಲಿಗೆ ಹೋಗಿ ಲೊಕೇಷನ್ ಕಳುಹಿಸುತ್ತೇನೆ. ದಂಧೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದೆಲ್ಲಾ ಹೇಳಿ ಪೊಲೀಸರನ್ನು ನಂಬಿಸುತ್ತಿದ್ದ. ಈ ಮಧ್ಯೆ ಆಟೋ ಪ್ರಾಬ್ಲಂ ಆಗ್ಬಿಟ್ಟಿದೆ, ಪೆಟ್ರೋಲ್ ಬೇಕಿತ್ತು, ಬೈಕ್ ಇಲ್ಲ. ಮನೆಯಲ್ಲಿ ಸಮಸ್ಯೆ ಎಂದು ಮತ್ತೆ ನಂಬಿಸಿ ಎರಡ್ಮೂರು ಸಾವಿರ ರೂಪಾಯಿ ಫೋನ್ ಪೇ ಮಾಡಿ ಎಂದು ಹೇಳುತ್ತಿದ್ದ. ಪೊಲೀಸರು ಆರೋಪಿ ನಿಜ ಹೇಳುತ್ತಿದ್ದಾನೆ ಎಂದು ನಂಬಿ ಆತ ಕೇಳಿದಷ್ಟು ಮೊತ್ತವನ್ನು ಫೋನ್ ಪೇ ಮಾಡುತ್ತಿದ್ದರು. ಹಣ ಬಂದ ಬಳಿಕ ವಸೀಂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಾಣಂತಿ ಹೆಂಡತಿ ಕೊಲೆ ಮಾಡಿದ ಪೊಲೀಸ್ ಗಂಡ : ವಿಷ ಸೇವಿಸಿ ಆಸ್ಪತ್ರೆಗೆ ದಾಖಲು