ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಅಭಿವೃದ್ಧಿ ಆಗಿದೆ ಅಲ್ವಾ, ನೀರಿನ ಸಮಸ್ಯೆ ಏನಾದರೂ ಇದ್ಯಾ?, ನೆಮ್ಮದಿಯಾಗಿ ಇದ್ದೀರಾ ಅಲ್ವಾ?. ಇದು ಬಿಜೆಪಿ ಅಭ್ಯರ್ಥಿ ಗೋಪಾಲಯ್ಯನವರ ಇವತ್ತಿನ ಪ್ರಚಾರದ ವೈಖರಿ. ಕಳೆದ ಎರಡು ಚುನಾವಣೆಯಲ್ಲೂ ನನ್ನ ಗೆಲ್ಲಿಸುತ್ತಾ ಬಂದಿದ್ದೀರಾ. ನಿಮ್ಮ ಮತಗಳನ್ನು ಹಾಕಿದ್ದೀರಾ ಈ ಸಲವು ಹಾಕಿ ಗೆಲ್ಲಿಸಿ ಅಂತ ಮನವಿ ಮಾಡಿದರು.
ಅಂದಹಾಗೇ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ದಿನೇ ದಿನೇ ಚುನಾವಣೆಯ ರಂಗು ಹೆಚ್ಚುತ್ತಿದೆ. ನಿನ್ನೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಇಂದಿನಿಂದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಹಾಗೂ ಮಾಜಿ ಉಪಮೇಯರ್ ಹರೀಶ್ ಕುಮಾರ್ ಜಂಟಿಯಾಗಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಕ್ಷೇತ್ರದ ಸಾಕಮ್ಮ ಬಡಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆ ಸಭೆ ನಡೆಸಲಾಯ್ತು. ಈ ವೇಳೆ ಗೋಪಾಲಯ್ಯಗೆ ಹರೀಶ್ ಕುಮಾರ್ ಸಾಥ್ ನೀಡಿ, ಗೋಪಾಲಯ್ಯ ಪರ ಮತಯಾಚನೆ ಮಾಡಿದರು. ಈ ಕುರಿತು ಮಾತನಾಡಿದ ಗೋಪಾಲಯ್ಯ, ಜನರು ನಮ್ಮನ್ನು ಈ ಬಾರಿ ಗೆಲ್ಲಿಸುತ್ತಾರೆ. ಅಭಿವೃದ್ಧಿ ಪರವಾಗಿ ಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.