ಬೆಂಗಳೂರು: ತಮಗೆ ಲಭಿಸಿದ ಪದ್ಮಶ್ರೀ ಪ್ರಶಸ್ತಿಯನ್ನು ಕನ್ನಡ ನಾಡಿನ ಜನತೆಗೆ, ತಂದೆ, ತಾಯಿ, ಗುರುಗಳು, ಜೋಗತಿ ಸಂಪ್ರದಾಯಕ್ಕೆ ಸಮರ್ಪಿಸುವುದಾಗಿ ಪದ್ಮಶ್ರೀ ಪುರಸ್ಕೃತ ಕಲಾವಿದೆ ಮಂಜಮ್ಮ ಜೋಗತಿ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಬಿಜೆಪಿ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ತಂದೆ, ತಾಯಿಯಿಂದ ದೂರವಾಗಿ ಸಂತೆ, ಮಾರುಕಟ್ಟೆ, ದೇವಸ್ಥಾನ, ರೈಲ್ವೆ ನಿಲ್ದಾಣಗಳಲ್ಲಿ ಮಲಗಿ ಬದುಕು ರೂಪಿಸಿಕೊಂಡೆ. ಜನರ ಕಿರುಕುಳದ ನಡುವೆ ಬದುಕು ನನ್ನದಾಗಿಸಿಕೊಂಡೆ. ಹಿಂದೆ ಬಸ್ಸಿನ ಸೀಟಿನಲ್ಲಿ ನನ್ನ ಬಳಿ ಕುಳಿತುಕೊಳ್ಳಲು ಪುರುಷರಾಗಲಿ, ಸ್ತ್ರೀಯರಾಗಲಿ ಮುಂದಾಗುತ್ತಿರಲಿಲ್ಲ. ಈಗ ಆ ಮನೋಭಾವದಲ್ಲಿ ಬದಲಾವಣೆ ಬಂದಿದೆ ಎಂದರು.
ಜೋಗತಿ ಕಲಾವಿದೆಯಾದ ನನಗೆ ರಾಷ್ಟ್ರಮಟ್ಟದ ಪ್ರಶಸ್ತಿ ಬರುವುದನ್ನು ಕನಸಿನಲ್ಲೂ ನೆನೆಸಿರಲಿಲ್ಲ. ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಈಗ ರಾಷ್ಟ್ರಮಟ್ಟದ ಗೌರವ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪದ್ಮಶ್ರೀ ಪುರಸ್ಕೃತ ಡಾ. ಆರ್.ಎಲ್.ಕಶ್ಯಪ್ರಿಗೆ ಸನ್ಮಾನ
ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಈ ವರ್ಷದ ಪದ್ಮಶ್ರೀ ಪುರಸ್ಕೃತ ಡಾ. ಆರ್.ಎಲ್.ಕಶ್ಯಪ್ರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಸನ್ಮಾನಿಸಿದರು.
ಆರ್.ಎಲ್.ಕಶ್ಯಪ್ ವೇದಗಳನ್ನು ಭಾರತೀಯ ಭಾಷೆಗಳಿಗೆ ಅನುವಾದಿಸುವ ಕೆಲಸವನ್ನು ತಪಸ್ಸು ಇದ್ದಂತೆ. ಕಶ್ಯಪ್ ಮುಂದಾಳತ್ವದ ಸಾಕ್ಷಿ ಸಂಸ್ಥೆ ಜ್ಞಾನ ಪ್ರಸರಣೆಯಲ್ಲಿ ಮಾಡುತ್ತಿರುವ ಕೆಲಸ ಪ್ರಶಂಸನಾರ್ಹ ಎಂದು ಸಚಿವರು ಹೊಗಳಿದರು.