ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಾರಾಟ ಹಾಗೂ ತಂಬಾಕು, ಗುಟ್ಕಾ ಮಾರಾಟ ಮತ್ತು ವಿತರಣೆ ನಿಯಂತ್ರಿಸಲು ಸುಗ್ರೀವಾಜ್ಞೆ ತರಲು ಸರ್ಕಾರ ಮುಂದಾಗಿದೆ.
ಈ ನಿಟ್ಟಿನಲ್ಲಿ ಒಂದು ವಾರದಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವುದಾಗಿ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಹಾಗೂ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಕ್ತರ್ ರಾಜ್ಯಪಾಲ ವಜುಭಾಯ್ ವಾಲಾರಿಗೆ ತಿಳಿಸಿದ್ದಾರೆ.
ಗುರುವಾರ ಇಬ್ಬರೂ ಹಿರಿಯ ಅಧಿಕಾರಿಗಳು ರಾಜಭವನದಲ್ಲಿ ರಾಜ್ಯಪಾಲ ವಜುಭಾಯ್ ವಾಲಾರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಸದ್ಯಕ್ಕೆ ಯಾವ ರೀತಿ ಡ್ರಗ್ಸ್ ಮಾಫಿಯಾ ಪ್ರಕರಣಗಳು, ಡ್ರಗ್ಸ್ ಹಾವಳಿ ಸಂಬಂಧ ವಿವರಿಸಿದರು.
ಜುಲೈ 31ರಂದು ತಂಬಾಕು, ಗುಟ್ಕಾ ಹಾಗೂ ತಂಬಾಕು ಮಿಶ್ರಿತ ಉತ್ಪನ್ನಗಳ ಮಾರಾಟ ಹಾಗೂ ವಿತರಣೆ ಕುರಿತು ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ರಾಜ್ಯಪಾಲರು ನಡೆಸಿದ್ದರು. ಸಭೆಯ ಬಳಿಕ ಡ್ರಗ್ಸ್ ನಿಯಂತ್ರಣ, ಸಾಗಾಟ ನಿಟ್ಟಿನಲ್ಲಿ ತೆಗೆದುಕೊಳ್ಳಲಿರುವ ಕ್ರಮಗಳ ಪ್ರಗತಿ ಬಗ್ಗೆ ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದಾರೆ.
ಇದೇ ವೇಳೆ ಡ್ರಗ್ಸ್ ಮಾರಾಟ ಜಾಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಿರುವುದು ಹಾಗೂ ಗಾಂಜಾ ವಶ ಪಡಿಸಿಕೊಂಡಿರುವ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ.