ಕಲಬುರಗಿ: ಆಪರೇಷನ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಅವರಿಗೆ ಡಿಸೆಂಬರ್ 16 ರವರೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರಕರಣದ ತಡೆಯಾಜ್ಞೆ ತೆರವಿಗೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ, ಕಲಬುರಗಿ ಹೈಕೊರ್ಟ್ ನ್ಯಾಯಮೂರ್ತಿ ಮಹ್ಮದ ನವಾಜ್ ನೇತೃತ್ವದ ಏಕಸದಸ್ಯ ಪೀಠ ಡಿಸೆಂಬರ್ 16ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಗುರುಮಿಠಕಲ್ ಶಾಸಕ ನಾಗನಗೌಡ ಕಂದಕೂರ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದರೆ, 10 ಕೋಟಿ ರೂಪಾಯಿ ನೀಡುವ ಆಮಿಷವನ್ನು ಒಡ್ಡಲಾಗಿದೆ ಎಂದು ದೇವದುರ್ಗ ಪೊಲೀಸ್ ಠಾಣೆಯಲ್ಲಿ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರ ದೂರು ದಾಖಲಿಸಿದ್ದರು. ಈ ಕುರಿತಾಗಿ ಆಡಿಯೋ ಕೂಡಾ ಬಹಿರಂಗಗೊಳಿಸಿದ್ದರು. ಪ್ರಕರಣದ ತನಿಖೆಗೆ ಕಲಬುರಗಿ ಹೈಕೋರ್ಟ್ ಪೀಠದಿಂದ ಯಡಿಯೂರಪ್ಪ ತಡೆಯಾಜ್ಞೆ ತಂದಿದ್ದು, ತಡೆಯಾಜ್ಞೆ ತೆರವುಗೊಳಿಸುವಂತೆ ಶರಣಗೌಡ ಕಂದಕೂರ ಅರ್ಜಿ ಸಲ್ಲಿಸಿದ್ದಾರೆ.
ಇನ್ನು, ದೂರುದಾರ ಶರಣಗೌಡ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡನೆ ಮಾಡಿದ್ದು, ಸಿಎಂ ಯಡಿಯೂರಪ್ಪನವರ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದರು. ಇಬ್ಬರ ವಾದ ಆಲಿಸಿದ ನ್ಯಾಯಮೂರ್ತಿಗಳು ಡಿಸೆಂಬರ್ 16 ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.