ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ನಡೆದು ಎರಡು ವರ್ಷಗಳಾಗುತ್ತಿವೆ. ಈ ಸಂಬಂಧ ರಚಿಸಲಾಗಿರುವ ನಿವೃತ್ತ ನ್ಯಾ.ಎಚ್.ಎಸ್.ಕೆಂಪಣ್ಣ ನೇತೃತ್ವದ ಕ್ಲೇಮ್ಸ್ ಕಮೀಷನ್ ಗೆ ಇದುವರೆಗೂ 90 ಅರ್ಜಿಗಳು ಮಾತ್ರ ಬಂದಿವೆ. ತನಿಖೆ ಕಾರ್ಯ ಅಂತಿಮ ಹಂತದಲ್ಲಿದ್ದು, ಒಂದೆರಡು ತಿಂಗಳುಗಳಲ್ಲಿ ಹೈಕೋರ್ಟ್ ಗೆ ವರದಿ ನೀಡಲು ಸಿದ್ದತೆ ನಡೆಸುತ್ತಿದೆ.
ಗಲಭೆಯಲ್ಲಿ ಅಪಾರ ಪ್ರಮಾಣದ ಆಸ್ತಿ - ಪಾಸ್ತಿ ಹಾಗೂ ವಾಹನಗಳು ಹಾನಿಯಾಗಿದ್ದು, ಪರಿಹಾರ ಕೋರಿ ಕಳೆದ ಎರಡು ವರ್ಷಗಳಲ್ಲಿ 90 ಮಂದಿ ಮಾತ್ರ ಕ್ಲೆಮ್ಸ್ ಕಮೀಷನರ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಡಿ.ಜೆ.ಹಳ್ಳಿಯಿಂದ 75 ಹಾಗೂ ಕೆ.ಜಿ.ಹಳ್ಳಿಯಿಂದ 15 ಅರ್ಜಿಗಳು ಬಂದಿವೆ. ಡಿ.ಜೆ.ಹಳ್ಳಿಯಿಂದ 89 ಹಾಗೂ ಕೆ.ಜಿ.ಹಳ್ಳಿಯಿಂದ 13 ಮಂದಿ ಸೇರಿ ಒಟ್ಟು 102 ವಾಹನಗಳ ಮಾಲೀಕರು ನಷ್ಟ ಪರಿಹಾರ ನೀಡುವಂತೆ ದೂರು ನೀಡಿದ್ದಾರೆ. 17 ಪ್ರಾರ್ಪಟಿಗಳು ಗಲಭೆಯಲ್ಲಿ ನಷ್ಟವಾಗಿದೆ. ಇದರಲ್ಲಿ ಪೊಲೀಸ್ ಠಾಣೆ, ಅಂಗಡಿ, ಮನೆ ಇನ್ನಿತರ ಆಸ್ತಿಗಳು ಸೇರಿವೆ.
ಗಲಭೆಯಿಂದಾಗಿ ಡಿ.ಜೆ.ಹಳ್ಳಿಯಲ್ಲಿ 65 ಹಾಗೂ ಕೆ.ಜಿ.ಹಳ್ಳಿಯಲ್ಲಿ 35 ವಾಹನ ಸೇರಿ 100 ವಾಹನಗಳು ನಾಶವಾಗಿವೆ. ಕೆಜಿ ಹಳ್ಳಿಯಲ್ಲಿ ಮೂರು ವಾಹನಗಳು ಸಾರ್ವಜನಿಕರಾದರೆ, ಏಳು ಸರ್ಕಾರಿ ವಾಹನಗಳು ನಾಶವಾಗಿದೆ. ತಮ್ಮ ಬೈಕ್ ಸುಟ್ಟಿರುವುದಾಗಿ 25 ಮಂದಿ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ.
ಅದೇ ರೀತಿ ಡಿಜೆ ಹಳ್ಳಿಯಲ್ಲಿ 65 ವಾಹನಗಳು ನಷ್ಟವಾಗಿವೆ. ಸಾರ್ವಜನಿಕರಿಂದ 26 ವಾಹನಗಳ ಅರ್ಜಿಗಳು ಬಂದಿವೆ. 9 ಸರ್ಕಾರಿ ನೌಕರರ ವಾಹನಗಳು, ಎರಡು ಪೊಲೀಸ್ ವ್ಯಾನ್, ಐದು ಬಸ್ ಹಾಗೂ 9 ನಾಲ್ಕು ಚಕ್ರ ಸೇರಿ ಒಟ್ಟು 65 ವಾಹನಗಳು ನಷ್ಟವಾಗಿರುವ ಬಗ್ಗೆ ದೂರುಗಳು ಬಂದಿವೆ.
(ಇದನ್ನೂ ಓದಿ: ಸಿನಿಮೀಯ ಶೈಲಿ ಕಾರ್ಯಾಚರಣೆ; ಅಡಗಿ ಕುಳಿತಿದ್ದ 'ಬೆಂಕಿ ಆರೋಪಿ'ಗಳ ಬಂಧನ)
ನಷ್ಟವಾಗಿದ್ದು ನೂರಾರು ಮಂದಿಗೆ ಬಂದಿದ್ದು ಅರ್ಜಿ ಬಂದಿದ್ದು 90 ಮಾತ್ರ : ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ಗಲಭೆಯಿಂದಾಗಿ ನೂರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿಗೆ ಹಾನಿಯಾಗಿತ್ತು. ಹಿಂಸಾಚಾರ ಸಂಬಂಧ 400ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು.
ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ವಿವಾದಾತ್ಮಕ ಬರಹ ಅಹಿತಕರ ಘಟನೆಗಳಿಗೆ ಕಾರಣವಾಗಿತ್ತು. ನೂರಾರು ಸಂಖ್ಯೆಯಲ್ಲಿ ವಾಹನಗಳು ಹೊತ್ತಿ ಉರಿದರೆ, ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಘಟನೆ ಸಂಬಂಧ 2020 ಆಗಸ್ಟ್ ನಲ್ಲಿ ಹೈಕೋರ್ಟ್ ಅಧಿಸೂಚನೆಯಂತೆ ರಾಜ್ಯ ಸರ್ಕಾರ ನಿವೃತ್ತ ನ್ಯಾ.ಕೆಂಪಣ್ಣ ನೇತೃತ್ವದಲ್ಲಿ ಕ್ಲೆಮ್ಸ್ ಕಮೀಷನ್ ರಚಿಸಿ ಬಾಲಬ್ರೂಯಿ ಕಟ್ಟಡದಲ್ಲಿ ಮೂಲಸೌಕರ್ಯ ಒದಗಿಸಿತ್ತು.
ಗಲಭೆಕೋರರಿಂದಲೇ ನಷ್ಟ ಭರಿಸುವುದು ಕಮೀಷನ್ ಉದ್ದೇಶವಾಗಿತ್ತು. ಸದ್ಯ 90 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದು ಹಲವರು ಸೂಕ್ತ ದಾಖಲಾತಿಯಿಲ್ಲದೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹಾನಿಗೊಳಗಾಗಿರುವ ವಾಹನ ಮಾಲೀಕರ ಬಳಿ ದಾಖಲಾತಿ ಲಭ್ಯವಿಲ್ಲದಿರುವುದು ನಿರೀಕ್ಷಿತ ಮಟ್ಟದಲ್ಲಿ ಅರ್ಜಿ ಸಲ್ಲಿಸದಿರಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಅಧ್ಯಯನ ನಡೆಸಿದ ಬಳಿಕ ಹೈಕೋರ್ಟ್ಗೆ ವರದಿ ಸಲ್ಲಿಕೆ : ಗಲಭೆಯಲ್ಲಿ ಉಂಟಾಗಿರುವ ನಷ್ಟ ಸಂಬಂಧ ವಾಹನ ಮಾಲೀಕರು ಹಾಗೂ ಪ್ರಾಪರ್ಟಿ ಮಾಲೀಕರು ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಇದರಂತೆ ವಾಹನಗಳ ನೈಜ ನಷ್ಟವಾಗಿರುವ ಬಗ್ಗೆ ಮೌಲ್ಯಮಾಪನವನ್ನು ಆರ್ ಟಿಓ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಿದ್ದಾರೆ. ಸಾರ್ವಜನಿಕ ಆಸ್ತಿ - ಪಾಸ್ತಿ ನಷ್ಟವಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮೌಲ್ಯಮಾಪನ ಮಾಡಿಸಲಾಗಿದೆ. ಪರಿಹಾರ ಕೋರಿ ಅರ್ಜಿದಾರರು ಸಲ್ಲಿಸುವ ಮೊತ್ತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಡೆಸಿದ ಮೌಲ್ಯಮಾಪನ ವರದಿ ತುಲನೆ ಮಾಡಿ ಅಂತಿಮವಾಗಿ ಹಾನಿಯಾಗಿರುವ ಆಧಾರದ ಮೇರೆಗೆ ಪರಿಹಾರ ಮೊತ್ತವನ್ನ ಕ್ಲೆಮ್ಸ್ ಕಮೀಷನ್ ನಿಗದಿಪಡಿಸಲಿದೆ.
ಸದ್ಯ 90 ಮಂದಿ ಅರ್ಜಿಗಳು ಬಂದಿವೆ. ಸಂಬಂಧಿಸಿದ ಅಧಿಕಾರಿಗಳು ಮೌಲ್ಯಮಾಪನ ನಡೆಸಿದ ರಿಪೋರ್ಟ್ ಬಂದಿದ್ದು, ಎರಡನ್ನೂ ತುಲನೆ ಮಾಡಿ ಅಧ್ಯಯನ ನಡೆಸಿ ಹೈಕೋರ್ಟ್ಗೆ ವರದಿ ನೀಡಲಾಗುವುದು ಎಂದು ಕ್ಲೇಮ್ಸ್ ಕಮೀಷನರ್ ನ್ಯಾ. ಎಚ್.ಎಸ್.ಕೆಂಪಣ್ಣ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಓದಿ : ಭಟ್ಕಳದಲ್ಲಿ ಭಾರಿ ಮಳೆ : ಮನೆ ಮೇಲೆ ಗುಡ್ಡ ಕುಸಿತ, ನಾಲ್ವರು ಸಾವನ್ನಪ್ಪಿರುವ ಶಂಕೆ