ಬೆಂಗಳೂರು: ದೇಶದಾದ್ಯಂತ 500ಕ್ಕೂ ಹೆಚ್ಚು ಮಹಿಳಾ ಸಂಘಟನೆಗಳು, ಲಿಂಗಾಂತರಿಗಳು ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಸೆಪ್ಟೆಂಬರ್ 5ರಂದು 'ನಾವೆದ್ದು ನಿಲ್ಲದಿದ್ದರೆ' ಎಂಬ ಆನ್ಲೈನ್ ಆಂದೋಲನ ಹಮ್ಮಿಕೊಂಡಿವೆ.
ಈ ಕುರಿತು ಆನ್ಲೈನ್ ಸುದ್ದಿಗೋಷ್ಠಿ ನಡೆಸಿ ಮಹಿಳಾ ಹೋರಾಟಗಾರರು ಮಾತನಾಡಿದ್ದಾರೆ. ರಾಜಕೀಯ ಫ್ಯಾಸಿಸಂಅನ್ನು ಖಂಡಿಸಿದ ದಿಟ್ಟ ಮಹಿಳೆ ಗೌರಿ ಲಂಕೇಶ್ರನ್ನು ಹತ್ಯೆಗೈದು ಸೆಪ್ಟೆಂಬರ್ 5ಕ್ಕೆ ಮೂರು ವರ್ಷಗಳಾಗುತ್ತವೆ. ಅಂದು 'ನಾವೆದ್ದು ನಿಲ್ಲದಿದ್ದರೆ' ಎಂಬ ಆನ್ಲೈನ್ ಆಂದೋಲನ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಎಲ್ಲಾ ದಿಕ್ಕುಗಳಿಂದಲೂ ಸಂವಿಧಾನಕ್ಕೆ ಧಕ್ಕೆಯಾಗುತ್ತಿದೆ. ಸರ್ಕಾರದ ಆರ್ಥಿಕ ನೀತಿ ಖಾಸಗಿ ಬಂಡವಾಳಶಾಹಿಗಳನ್ನು ಓಲೈಸುತ್ತಿದೆ. ಹೀಗಾಗಿ ಇವೆಲ್ಲವನ್ನೂ ವಿರೋಧಿಸಿ, ನಿರ್ದಿಷ್ಟ ಬೇಡಿಕೆ ಇಟ್ಟುಕೊಂಡು ಬರೆದ ಪತ್ರವನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರಕ್ಕೆ ಒಪ್ಪಿಸುವುದು. ಬೇಡಿಕೆ ಈಡೇರಿಕೆಗೆ ಮುಖ್ಯಂಮಂತ್ರಿಗಳನ್ನು ಮನವಿ ಮಾಡುವುದು. ಸ್ಥಳೀಯ ಬೇಡಿಕೆಗಳೊಂದಿಗೆ ಸ್ಥಳೀಯ ಪ್ರಾಧಿಕಾರ, ಆಡಳಿತ ಕಚೇರಿ, ಸ್ಥಳೀಯ ರಾಜಕೀಯ ಮುಖಂಡರುಗಳಿಗೆ ಸ್ಥಳೀಯವಾದ ಹೋರಾಟದ ಮೂಲಕ ಸಕ್ರಿಯ ಸ್ಪಂದನೆಗೆ ಒತ್ತಾಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು.
ಸಾಂಸ್ಕೃತಿಕ ಚಟುವಟಿಕೆ ಹಾಗೂ ವಿವಿಧ ಕಾರ್ಯವಲಯಗಳ ಮಹಿಳೆಯರ, ರೈತರ, ದಿನಗೂಲಿ ಕಾರ್ಮಿಕರ, ಲೈಂಗಿಕ ಕಾರ್ಯಕರ್ತೆಯರ ಹೋರಾಟದ ಕಥೆ, ಮಾಹಿತಿ ವಿಡಿಯೋ ಬಿಡುಗಡೆ ಮಾಡುವುದು. ವಿದ್ಯಾರ್ಥಿಗಳು, ಕಾರ್ಯಕರ್ತರು, ಪ್ರಸಿದ್ಧ ವ್ಯಕ್ತಿಗಳ ಫೇಸ್ಬುಕ್ ಲೈವ್ ಮಾಡುವ ಮೂಲಕ ಆಂದೋಲನ ನಡೆಸಲಾಗುತ್ತಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಲಾಗಿದೆ.
ನಟಿ ನೀತು ಶೆಟ್ಟಿ ಮಾತನಾಡಿ, ಸೆ. 5ರಂದು ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳಿಗಾಗಿ ಆನ್ಲೈನ್ ಕ್ಯಾಂಪೇನ್ ನಡೆಯಲಿದೆ. ಸಮಾನ ಹಕ್ಕು ಸಿಕ್ಕಿದ್ದರೆ ಉತ್ತಮವಿರುತ್ತಿತ್ತು. ಹೀಗಾಗಿ ನಾನೂ ಕೂಡ ಈ ಆನ್ಲೈನ್ ಕ್ಯಾಂಪೇನ್ನಲ್ಲಿ ಭಾಗಿಯಾಗಲಿದ್ದೇನೆ ಎಂದಿದ್ದಾರೆ. ನಿರ್ದೇಶಕರು, ನಟರಾಗಿರುವ ಬಿ.ಸುರೇಶ್ ಮಾತನಾಡಿ, ಮಹಿಳಾ ಚಿಂತಕರು, ಹೋರಾಟಗಾರರು, ಮಹಿಳಾ ಸಂಘಟಕರ ಆನ್ಲೈನ್ ಕ್ಯಾಂಪೇನ್ಗೆ ಜಾತಿ ಮತ ಭೇದ ಮರೆತು ಒಂದಾಗಬೇಕಿದೆ. ನಾನೂ ಇದರಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ.