ಬೆಂಗಳೂರು: ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ವಿಭಜಿಸಿರುವುದರಿಂದ ಜಿಲ್ಲಾಸ್ಪತ್ರೆಗಳಲ್ಲಿ ರೋಗಿಗಳ ಸೇವೆ, ಸೌಲಭ್ಯದಲ್ಲಿ ಹಾಗೂ ಸಿಬ್ಬಂದಿ ವೇತನದಲ್ಲಿ ಸಾಕಷ್ಟ ತಾರತಮ್ಯವಾಗುತ್ತಿದೆ. ಆದ್ದರಿಂದ ಎರಡೂ ಇಲಾಖೆಗಳನ್ನು ಒಗ್ಗೂಡಿಸಬೇಕು ಹಾಗೂ ಒಬ್ಬರೇ ಮಂತ್ರಿಯನ್ನು ನೇಮಿಸಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾಯಕಲ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾದರಿ ಆಸ್ಪತ್ರೆಗಳಿಗೆ, ವೈದ್ಯರಿಗೆ ಹಾಗೂ ಆರೋಗ್ಯಾಧಿಕಾರಿಗಳಿಗೆ ಗೌರವ ಪುರಸ್ಕಾರ ನೀಡಿ ಸತ್ಕರಿಸಿದರು. ಬಳಿಕ ಮಾತಾನಾಡಿ, ಜಿಲ್ಲಾ ವೈದ್ಯಕೀಯ ಕಾಲೇಜುಗಳ ಡೀನ್ಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಯೋಜನೆಗಳ ಸಹಕಾರಕ್ಕೆ, ರೋಗಿಗಳಿಗೆ ಸೂಕ್ತ ಸೇವೆ ಒದಗಿಸಲು ಅಡಚಣೆಯಾಗುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ಸಂಪನ್ನಭರಿತವಾಗಿದೆ. ತನ್ನ ಎಲ್ಲಾ ಸಿಬ್ಬಂದಿಗೂ ಹೆಚ್ಚಿನ ವೇತನ ನೀಡುತ್ತಿದೆ. ಆದರೆ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಆ ಪ್ರಮಾಣದ ವೇತನ ಇಲ್ಲ. ಈ ತಾರತಮ್ಯವೂ ಕೂಡಾ ಸಿಬ್ಬಂದಿ ಕಾರ್ಯದಕ್ಷತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ, ಎರಡೂ ಇಲಾಖೆಯನ್ನು ಒಗ್ಗೂಡಿಸಿ ಒಬ್ಬರೇ ಮಂತ್ರಿಯನ್ನು ನೇಮಿಸಿದರೆ ಸಮನ್ವಯತೆ ಸಾಧ್ಯವಾಗಿ ರಾಜ್ಯದಲ್ಲಿ ಆರೋಗ್ಯ ಸೇವೆ ಉತ್ತಮಗೊಳಿಸಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಆರೋಗ್ಯ ಅಭಿಯಾನ ನಿರ್ದೇಶಕ ರಾಮಚಂದ್ರನ್, ಆರೋಗ್ಯ ನಿರ್ದೇಶಕ ಟಿ ಎಸ್ ಪ್ರಭಾಕರ್ ಉಪಸ್ಥಿತರಿದ್ದರು.