ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ಆರಂಭವಾಗಿದ್ದು, ಮಲ್ಲೇಶ್ವರಂನ ಎಂಇಎಸ್ ಕಾಲೇಜಿಗೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಭೇಟಿ ನೀಡಿ ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಭೇಟಿ ಬಳಿಕ ಮಾತನಾಡಿದ ಅವರು, ಇಂದು ಮತ್ತು ನಾಳೆ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆ ಎಲ್ಲ ಪ್ರೊಫೆಷನಲ್ ಕೋರ್ಸ್ಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳಿಗೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ. ಕೊರೊನಾದಿಂದ ಪರೀಕ್ಷೆ ತಡವಾಗಿದೆ. ಪ್ರತಿ ಕೊಠಡಿ ಸ್ಯಾನಿಟೈಸೇಷನ್ ಮಾಡಲಾಗಿದೆ. ಮಾಸ್ಕ್ ಕಡ್ಡಾಯ, ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ ಎಂದು ಪರೀಕ್ಷಾ ಕೇಂದ್ರಗಳಲ್ಲಿ ಮಾಡಿದ ವ್ಯವಸ್ಥೆ ಬಗ್ಗೆ ವಿವರಣೆ ನೀಡಿದರು.
ವಿದ್ಯಾರ್ಥಿಗಳು, ಪೋಷಕರು ಆತಂಕ ಪಡೋದು ಬೇಡ. ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳಿಗೆ ಮಾತ್ರ ಊಟದ ವ್ಯವಸ್ಥೆ ಮಾಡಿದ್ದೇವೆ. ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಇಂದು ಬೆಂಗಳೂರಿನಲ್ಲಿ ಒಟ್ಟು 12 ಮಂದಿ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಆಗಸ್ಟ್ನಲ್ಲಿ ರಿಸಲ್ಟ್ ಬರುತ್ತದೆ. ಕೊನೆಯಲ್ಲಿ ಕೌನ್ಸೆಲಿಂಗ್ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಹಾಗೂ ಸೆಪ್ಟೆಂಬರ್ನಿಂದ ಕೋರ್ಸ್ಗಳು ಆರಂಭವಾಗಲಿವೆ ಎಂದು ಹೇಳಿದರು.