ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಹಾಗೆಯೇ ಎಲ್ಲೆಡೆ ದೈಹಿಕ ಅಂತರ ಹಾಗೂ ಮಾಸ್ಕ್ ಧರಿಸದೇ ಇರುವವರಿಗೆ ಸರ್ಕಾರದ ನಿಯಮದ ಹಾಗೆ ದಂಡವನ್ನು ಪೊಲೀಸರು ಹಾಗೂ ಬಿಬಿಎಂಪಿ ಮಾರ್ಷಲ್‌ಗಳು ಹಾಕ್ತಿದ್ದಾರೆ. ಆದ್ರೆ ಪಾರ್ಟಿಪ್ರಿಯರು ಓಲಾ, ಉಬರ್ ಚಾಲಕರ ಜೊತೆ ಜಗಳ ಮಾಡ್ತಿದ್ದು, ಇದರ ವಿರುದ್ಧ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸದ್ಯ ರಾಜ್ಯಸರ್ಕಾರ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿರುವ ಕಾರಣ ಮಾಸ್ಕ್ ಧರಿಸದೇ ಬೈಕ್ ಹಾಗೂ ಕಾರುಗಳಲ್ಲಿ ಸಂಚಾರ ಮಾಡಿದ್ರೆ ಮಾರ್ಷಲ್‌ಗಳು ಹಾಗೂ ಪೊಲೀಸರು ಫೈನ್ ಹಾಕ್ತಿದ್ದಾರೆ. ಪಬ್, ಬಾರ್ ಹೋಟೆಲ್ಗಳಲ್ಲಿ ಪಾರ್ಟಿಗಳು ಶುರುವಾಗಿವೆ. ಹೀಗಾಗಿ ಮೋಜು-ಮಸ್ತಿ ಅಂತ ಪಬ್ಗಳಲ್ಲಿ ಪಾರ್ಟಿ ಮುಗಿದ ನಂತರ ಹೊರಬರ್ತಿರುವ ಸಿಟಿ ಮಂದಿ ಓಲಾ, ಉಬರ್ ಚಾಲಕರಿಗೆ ತಲೆನೋವಾಗಿ ಕಾಡ್ತಿದ್ದಾರೆ.
ಕ್ಯಾಬ್ ಹತ್ತುವಾಗ ಮಾಸ್ಕ್ ಧರಿಸುತ್ತಿದ್ದಾರೆ. ಕ್ಯಾಬ್ ಮೂವ್ ಆಗ್ತಿದ್ದಂತೆ ಕಾರಿನ ಒಳಗೆ ಮಾಸ್ಕ್ ರಿಮೂವ್ ಮಾಡ್ತಿದ್ದಾರೆ. ಇದನ್ನು ಪ್ರಶ್ನಿಸಿದ್ರೆ ಕ್ಯಾಬ್ ಚಾಲಕರ ಜೊತೆ ಮಾತಿನ ಚಕಮಕಿಗೆ ಇಳಿದು ರಂಪ ಮಾಡ್ತಿದ್ದಾರೆ ಅನ್ನೋದು ಕ್ಯಾಬ್ ಚಾಲಕರ ಆರೋಪ.
ಕ್ಯಾಬ್ ಒಳಗಡೆ ಇರುವವರು ಮಾಸ್ಕ್ ಹಾಕದೇ ಇರೋದು ಕಂಡು ಬಂದ್ರೆ ಪೊಲೀಸರು, ಮಾರ್ಷಲ್‌ಗಳು ವಾಹನ ಅಡ್ಡಗಟ್ಟಿ ದಂಡ ಹಾಕ್ತಾರೆ. ಗ್ರಾಹಕರು ಮಾಡುವ ತಪ್ಪಿಗೆ ನಾವು ಪೊಲೀಸರಿಗೆ ಉತ್ತರ ನೀಡಬೇಕು. ಹೀಗಾಗಿ ಪೊಲೀಸರು ಹಾಗೂ ಮಾರ್ಷಲ್‌ಗಳು ಇದರ ಬಗ್ಗೆ ಗಮನ ಹರಿಸಬೇಕೆಂದು ಕ್ಯಾಬ್ ಚಾಲಕರ ಮನವಿ ಮಾಡಿದ್ದಾರೆ.