ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಂದ ಕೂಡಲೇ ತೆರಿಗೆ ಸಂಗ್ರಹಿಸಲು ಮುಖ್ಯ ಆಯುಕ್ತ ಗೌರವ್ ಗುಪ್ತ ಕಂದಾಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಸಂಬಂಧ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಕಂದಾಯ ಅಧಿಕಾರಿಗಳು, ಸಹಾಯ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಕಾರ್ಯೋನ್ಮುಖರಾಗಬೇಕು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿ ತೆರಿಗೆ ಸಂಗ್ರಹಿಸಲು ಸೂಕ್ತ ಕ್ರಮ ವಹಿಸಬೇಕು. ಆಸ್ತಿ ತೆರಿಗೆ ವ್ಯಾಪ್ತಿಗೆ ಬಾರದ ಆಸ್ತಿಗಳನ್ನು ಪತ್ತೆ ಮಾಡಿ ತೆರಿಗೆ ವ್ಯಾಪ್ತಿಗೆ ತರಬೇಕು ಹಾಗೂ ಬಾಕಿ ಉಳಿಸಿಕೊಂಡಿರುವ ಸುಧಾರಣಾ ಶುಲ್ಕವನ್ನು ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಆಸ್ತಿ ಮಾಲೀಕರು ಸ್ವಯಂ ಘೋಷಣಾ ಆಸ್ತಿ ತೆರಿಗೆ ಪದ್ದತಿಯನ್ನು ಮಾಡದಿದ್ದರೆ, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆಸ್ತಿ ತೆರಿಗೆಯನ್ನು ನಿಗದಿಪಡಿಸಿ ತೆರಿಗೆ ಸಂಗ್ರಹಿಸುವ ಕೆಲಸ ಮಾಡಲು ಕಂದಾಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಾಲಿಕೆಗೆ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿರುವ ಟಾಪ್ ಡಿಫಾಲ್ಟರ್ಗಳ ಪಟ್ಟಿ ಅನುಸಾರ ಕಾನೂನು ರೀತಿಯ ಕ್ರಮ ಕೈಗೊಂಡು ತೆರಿಗೆ ವಸೂಲಿ ಮಾಡಿ. ಖಾತಾ ಮೇಳ ಮಾಡಿ ಖಾತೆಗಳು ನೀಡದವರಿಗೆ ಕೆಲಸ ಆಗಬೇಕು. ಈ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಇದನ್ನೂ ಓದಿ: ‘ನಾಲ್ವರೊಳಗೆ ಇಬ್ಬರು' ವಿಶೇಷ ಫೋಟೋ ಹಂಚಿಕೊಂಡ ಬಿಸಿಸಿಐ: ಅಭಿಮಾನಿಗಳು ಖುಷ್
ಪ್ರಸಕ್ತ ಸಾಲಿನಲ್ಲಿ 4,000 ಕೋಟಿ ರೂ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಇದುವರೆಗೆ 2,483.91 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ.
ವಾರಕ್ಕೊಮ್ಮೆ ಎಲ್ಲಾ ವಲಯಗಳಲ್ಲಿ ಸಭೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದ ಜನತೆಯ ಮೂಲಭೂತ ಸೌಕರ್ಯ ಹಾಗೂ ಕುಂದುಕೊರತೆಗಳು ಹಾಗೂ ಅಗತ್ಯತೆಗಳನ್ನು ಕಲ್ಪಿಸಲು ಎಲ್ಲಾ ವಲಯಗಳಲ್ಲಿ ವಾರಕ್ಕೊಮ್ಮೆ ಸಾರ್ವಜನಿಕ ಕುಂದು ಕೊರತೆ ಸಭೆಗಳನ್ನು ನಡೆಸಲು ಮುಖ್ಯ ಆಯುಕ್ತರು ನಿರ್ದೇಶಿಸಿದರು.
ಪಾಲಿಕೆಯ ಎಲ್ಲಾ 8 ವಲಯಗಳು, ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಲಯದ ಜಂಟಿ ಆಯುಕ್ತರು ಹಾಗೂ ಅಧೀನ ಸಿಬ್ಬಂದಿಗಳೊಂದಿಗೆ ಪ್ರತಿವಾರ ಕಡ್ಡಾಯವಾಗಿ ಸಾರ್ವಜನಿಕ ಕುಂದು ಕೊರತೆ ಸಭೆಗಳನ್ನು ಆಯೋಜಿಸಲು ಗೌರವ್ ಗುಪ್ತಾ ಸೂಚಿಸಿದರು.
ಈ ಸಭೆಗಳನ್ನು ಆಯೋಜಿಸುವಾಗ ದಿನಾಂಕ, ಸ್ಥಳ ಹಾಗೂ ಸಮಯದ ಮಾಹಿತಿಯನ್ನು ಸಾರ್ವಜನಿಕರಿಗೆ ಮುಂಚಿತವಾಗಿ ತಿಳಿಸಲು ವ್ಯಾಪಕ ಪ್ರಚಾರ ಮಾಡಬೇಕು. ಸಾರ್ವಜನಿಕರಿಂದ ಬರುವ ಸಲಹೆ, ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಎಲ್ಲಾ ವಲಯ ಆಯುಕ್ತರವರಿಗೆ ನಿರ್ದೇಶನ ನೀಡಿದರು.
ವಲಯ ಮಟ್ಟದ ಸಭೆಗೆ ಸಂಬಂಧಪಟ್ಟ ಪಾಲಿಕೆಯ ಎಲ್ಲಾ ವಿಭಾಗದ ಅಧಿಕಾರಿಗಳನ್ನು ಹಾಗೂ ವಿವಿಧ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಬೆಸ್ಕಾಂ, ಬಿ.ಡ್ಲ್ಯೂ.ಎಸ್.ಎಸ್.ಬಿ, ಪೋಲಿಸ್, ಟ್ರಾಫಿಕ್, ಸ್ಲಮ್ ಬೋರ್ಡ್, ಹೌಸಿಂಗ್ ಬೋರ್ಡ್, ಇತರ ಸರ್ಕಾರಿ ಇಲಾಖೆಗಳ ಅಧಿಕಾರಿಗಳನ್ನು ಮತ್ತು ವಲಯದಲ್ಲಿನ ಸಕ್ರಿಯ ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಓ), ವಲಯ ವ್ಯಾಪ್ತಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು(ಆರ್.ಡಬ್ಲ್ಯೂ.ಎ) ರನ್ನು ಆಹ್ವಾನಿಸಿ ಕುಂದು ಕೊರತೆಗಳನ್ನು ಕುರಿತು ಚರ್ಚಿಸಿ ಎಂದರು.
ಪಾಲಿಕೆ ವ್ಯಾಪ್ತಿಗೊಳಪಡುವ ಕುಡಿಯುವ ನೀರು ಪೂರೈಕೆ, ಶುಚಿತ್ವ, ಬೀದಿದೀಪ ಒಟ್ಟಾರೆ ವ್ಯವಸ್ಥೆಗಳ ಕುರಿತಾದ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಪ್ರತಿವಾರ ವಲಯ ವ್ಯಾಪ್ತಿಯಲ್ಲಿ ವಿಶೇಷ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಸಾರ್ವಜನಿಕ ಕುಂದು ಕೊರತೆ ಸಭೆಗಳಲ್ಲಿ ಜನತೆ ಪರಿಹಾರ ಕಂಡುಕೊಳ್ಳುವಂತೆ ಅವರು ತಿಳಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತ (ಕಂದಾಯ) ಡಾ.ಆರ್ .ಎಲ್ ದೀಪಕ್ , ವಲಯ ಆಯುಕ್ತರು, ಎಲ್ಲಾ ವಲಯಗಳ ಜಂಟಿ ಆಯುಕ್ತರು, ಕಂದಾಯ ವಿಭಾಗದ ಉಪ ಆಯುಕ್ತರು, ಕಂದಾಯ ವಿಭಾಗದ ಜಂಟಿ ಆಯುಕ್ತರು ಹಾಗೂ ಎಲ್ಲಾ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.