ಬೆಂಗಳೂರು: ಒಡಿಶಾ ಭೀಕರ ರೈಲು ದುರಂತವು ದೇಶವನ್ನೇ ಬೆಚ್ಚಿಬೀಳಿಸಿದೆ. 280 ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ. ಸಾವು ನೋವು ಮತ್ತು ತಮ್ಮವರ ಸಲುವಾಗಿ ಮಾಹಿತಿ ಪಡೆದುಕೊಳ್ಳಲು ರೈಲ್ವೆ ಇಲಾಖೆ ಸಹಾಯವಾಣಿ ಆರಂಭಿಸಿದೆ.
ಬೆಂಗಳೂರು- 080-22356409, ಬಂಗಾರಪೇಟೆ- 08153 255253, ಕುಪ್ಪಂ-8431403419, ಸರ್ ಎಂ ವಿಶ್ವೇಶ್ವರಯ್ಯ ಬೆಂಗಳೂರು- 09606005129, ಕೆಜೆಎಂ ಬೆಂಗಳೂರು- 88612 03980 ಇಲ್ಲಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಮತ್ತು ನೀಡಬಹುದಾಗಿದೆ.
ರಾಜ್ಯದವರ ಸಾವು ಶಂಕೆ: ರೈಲು ದುರ್ಘಟನೆಯಲ್ಲಿ ಬೆಂಗಳೂರಿನ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಯಾವ ರೈಲಿನಲ್ಲಿ ಇವರು ಇದ್ದರು, ಎಲ್ಲಿಗೆ ಹೋಗುತ್ತಿದ್ದರು ಎಂಬ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಅಲ್ಲದೇ, ಚಿಕ್ಕಮಗಳೂರಿನ 110 ಜನರು ಡಿಕ್ಕಿಯಾದ ಹೌರಾ ರೈಲಿನಲ್ಲಿ ಇದ್ದರು ಎಂದು ಹೇಳಲಾಗಿದೆ. ಅವರು ಜಾರ್ಖಂಡ್ಗೆ ಪ್ರವಾಸಕ್ಕೆ ತೆರಳುತ್ತಿದ್ದರು. ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ರೈಲು ಸಂಚಾರ ರದ್ದು: ಇದೇ ವೇಳೆ ಒಡಿಶಾದಲ್ಲಿ ನಡೆದಿರುವ ಅಪಘಾತ ಮಾರ್ಗವಾಗಿ ಬೆಂಗಳೂರಿನಿಂದ ತೆರಳಬೇಕಿದ್ದ ಮೂರು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. 12551 ಸಂಖ್ಯೆಯ ಎಸ್ವಿಎಂಬಿ- ಕೆವೈಕ್ಯೂ, 12864 ಸಂಖ್ಯೆಯ ಎಸ್ವಿಎಂಬಿ- ಎಚ್ಡಬ್ಯೂಎಚ್, 12253-ಎಸ್ವಿಎಂಬಿ-ಬಿಜಿಪಿ ರೈಲು ಸಂಚಾರ ಸ್ಥಗಿತ ಮಾಡಲಾಗಿದೆ.
ಹೆಲ್ಪ್ಲೈನ್ಗೆ ಕರೆ ಬಂದಿಲ್ಲ: ಈ ಬಗ್ಗೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಮಾಹಿತಿ ನೀಡಿರುವ ರೈಲ್ವೆ ಪೊಲೀಸ್ ಡಿಐಜಿ ಪಿ.ಶಶಿಕುಮಾರ್ ಅವರು, ಅಪಘಾತಕ್ಕೀಡಾದ ಹೌರಾ ರೈಲು ಬೈಯಪ್ಪನಹಳ್ಳಿ ನಿಲ್ದಾಣದಿಂದ ಹೊರಟಿತ್ತು. ಇಲ್ಲಿಂದ ಹೌರಾಗೆ 46 ಘಂಟೆಗಳ ಪ್ರಯಾಣವಾಗಿದೆ. ಈ ವೇಳೆ, ರಾತ್ರಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಮೂರು ಬೋಗಿಗಳು ಸಂಪೂರ್ಣ ಜಖಂ ಆಗಿವೆ. ಮಾಹಿತಿ ತಿಳಿದ ತಕ್ಷಣವೇ ನಿನ್ನೆ ರಾತ್ರಿಯಿಂದ ಅಲ್ಲಿಗೆ ಹೊರಡುವ ರೈಲುಗಳನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದರು.
ಗಾಯಾಳು, ಸಾವು - ನೋವುಗಳ ಬಗ್ಗೆ ನಮ್ಮ ನಿಲ್ದಾಣಕ್ಕೆ ಸ್ಪಷ್ಟ ಮಾಹಿತಿ ದೊರೆತಿಲ್ಲ. ಸದ್ಯ ಬೆಂಗಳೂರಲ್ಲಿ ನಾಲ್ಕು ಹೆಲ್ಪ್ಲೈನ್ ಓಪನ್ ಮಾಡಲಾಗಿದೆ. ಈವರೆಗೆ ಹೆಲ್ಪ್ ಲೈನ್ಗೆ ಒಂದೂ ಕರೆ ಬಂದಿಲ್ಲ. ನಿನ್ನೆ ರಾತ್ರಿಯಿಂದಲೂ ಸಿಬ್ಬಂದಿ ಯವುದೇ ಕರೆ ಸ್ವೀಕರಿಸಿಲ್ಲ. ಜನರಲ್ ಬೋಗಿ, ರಿಸರ್ವೇಶನ್ ಬೋಗಿಗಳಿಗೆ ಹೆಚ್ಚು ಹಾನಿಯಾಗಿವೆ ಎನ್ನುವ ಮಾಹಿತಿ ಇದೆ. ಬೋಗಿಗಳಲ್ಲಿ ರಾಜ್ಯಕ್ಕೆ ಕೆಲಸ ಅರಸಿ ಬಂದವರು ಹೆಚ್ಚು ಇದ್ದರು. ಸದ್ಯಕ್ಕೆ ಕರ್ನಾಟಕದವರ ಸಾವಿನ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ ಎಂದು ತಿಳಿಸಿದರು.
ಪ್ರಯಾಣಿಕರ ಪರದಾಟ: ಬೆಂಗಳೂರಿನಿಂದ ತೆರಳುವ ಮೂರು ರೈಲುಗಳನ್ನು ರದ್ದು ಮಾಡಲಾಗಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕಾಮಾಕ್ಯ, ಭಾಗಲಪುರ್, ಹೌರಾ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಟಿಕೆಟ್ ಕ್ಯಾನ್ಸಲೇಷನ್ಗಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಆನ್ಲೈನ್ ಮೂಲಕ ಮತ್ತು ನಿಲ್ದಾಣದಲ್ಲಿ ಟಿಕೆಟ್ ಮೊತ್ತ ವಾಪಸ್ ಪಡೆಯಲು ಸರ್ವಾಜನಿಕರು ಸಾಲು ಗಟ್ಟಿ ನಿಂತಿದ್ದಾರೆ. ಎರಡೂವರೆ ತಿಂಗಳ ಹಿಂದೆಯೇ ಟಿಕೆಟ್ ಬುಕ್ ಮಾಡಲಾಗಿದ್ದು. ಅಪಘಾತದ ಕಾರಣ ಕ್ಯಾನ್ಸಲ್ ಎಂದು ಮೆಸೇಜ್ ಬಂದಿದೆ.
ಹೆಲ್ಪ್ ಲೈನ್ಗೆ ಫೋನ್ ಮಾಡಿದರೆ ಯಾರು ಕೂಡ ಫೋನ್ ತೆಗೆಯುತ್ತಿಲ್ಲ ಎಂದು ಕೆಲ ಪ್ರಯಾಣಿರು ದೂರಿದ್ದಾರೆ. ರೈಲ್ವೆ ಇಲಾಖೆ ಯಾವ ಕಾರಣಕ್ಕೆ ಹೆಲ್ಪ್ ಡೆಸ್ಕ್ ಆರಂಭಿಸಿದೆ ಎಂಬುದು ಗೊತ್ತಿಲ್ಲ ತಿಳಿಯುತ್ತಿಲ್ಲ ಎಂದು ಜನರು ಅಳಲು ತೋಡಿಕೊಂಡರು.
ಇದನ್ನೂ ಓದಿ: ಬಾಲಸೋರ್ ಭೀಕರ ರೈಲು ದುರಂತದ ಭಯಾನಕ ದೃಶ್ಯಗಳು ಸೆರೆ!