ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಗೆ ನಿರಾಕರಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 8 ಆಸ್ಪತ್ರೆಗಳಿಗೆ ನೋಟಿಸ್ ಕೊಟ್ಟಿದ್ದೇವೆ. ಅವರ ಒಪಿಡಿ ಬಂದ್ ಮಾಡಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಅಕ್ಷಯ ಗೋಲ್ಡ್ ಸಂಸ್ಥೆ ಬೆಂಗಳೂರು ದಕ್ಷಿಣ ವಲಯಕ್ಕೆ ನೀಡಿದ ನಾಲ್ಕು ಆಂಬ್ಯುಲೆನ್ಸ್ಗಳಿಗೆ ವಿಧಾನಸೌಧದ ಮುಂದೆ ಇಂದು ಚಾಲನೆ ನೀಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಆ ಆಸ್ಪತ್ರೆಗಳನ್ನು ಸಂಪೂರ್ಣ ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವೈದ್ಯರು ಕೊರೊನಾ ವಾರಿಯರ್ಸ್ ಆದ ಮೇಲೆ ನೆಪ ಹೇಳಿ ಕರ್ತವ್ಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುವ ಕೆಲಸ ಮಾಡಬಾರದು. ವೈದ್ಯರು ಮತ್ತು ನರ್ಸ್ ಕಡ್ಡಾಯವಾಗಿ ತಮ್ಮ ಜವಾಬ್ದಾರಿ ನಿಭಾಯಿಸಬೇಕು. ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಕ್ಷಯ ಗೋಲ್ಡ್ ಕಂಪನಿಯವರು ಬೆಂಗಳೂರು ದಕ್ಷಿಣಕ್ಕೆ 4 ಆಂಬ್ಯುಲೆನ್ಸ್ ನೀಡಿದ್ದಾರೆ. ಇವುಗಳ ಸದುಪಯೋಗವಾಗಬೇಕು. ಖಾಸಗಿ ಆಸ್ಪತ್ರೆಯವರು ಕೂಡ ಮಾನವೀಯತೆಯಿಂದ ರೋಗಿಗಳಿಗೆ ಬೆಡ್ ನೀಡಿದರೆ ಉತ್ತಮ ಎಂದರು.
ಸಿಎಂ ಸ್ಥಾನ ಖಾಲಿ ಇಲ್ಲ: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಮ್ಮ ನಾಯಕರು ಎಂದು ಅಶೋಕ್ ಸ್ಪಷ್ಟಪಡಿಸಿದರು. ಸಾಮಾನ್ಯವಾಗಿ ಸರ್ಕಾರ ಒಂದು ವರ್ಷ ಪೂರೈಸಿದಾಗ ಮುಖ್ಯಮಂತ್ರಿ ದೆಹಲಿಗೆ ಹೋಗಿ ಶುಭಾಶಯ ಕೋರುವುದು ಸಂಪ್ರದಾಯ. ಆದರೆ ಕೊರೊನಾ ಇರುವುದರಿಂದ ಸಿಎಂ ದೆಹಲಿಗೆ ಹೋಗಲು ಸಾಧ್ಯವಾಗಿಲ್ಲ. ನಮ್ಮಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ನಾವು ಯಡಿಯೂರಪ್ಪ ಪರ, ಅವರೇ ನಮ್ಮ ನಾಯಕರು ಎಂದು ಪುನರುಚ್ಚರಿಸಿದರು.