ಕೆ.ಆರ್.ಪುರ/ಬೆಂಗಳೂರು: ಕೆ.ಆರ್. ಪುರ ರೈಲ್ವೆ ನಿಲ್ದಾಣದಲ್ಲಿ ಜನ ಕೋವಿಡ್ ಮರೆತು ಆರಾಮಾಗಿ ಓಡಾಡುತ್ತಿದ್ದಾರೆ. ಕೇರಳದಲ್ಲಿ ಕೊರೊನಾ ಹೆಚ್ಚಾಗಿದೆ, ಅಲ್ಲಿಂದ ಆಗಮಿಸುವ ಕೋಚಿವೆಲ್ಲಿ ರೈಲಿನಲ್ಲಿ ಕೆ.ಆರ್ ಪುರ ರೈಲು ನಿಲ್ದಾಣಕ್ಕೆ ನೂರಾರು ಜನ ಬರುತ್ತಿದ್ದಾರೆ.
ಏಕಕಾಲಕ್ಕೆ ಬರುವ ನೂರಾರು ಜನರಿಗೆ ಟೆಸ್ಟ್ ಮಾಡುವುದು ತುಂಬಾ ಕಷ್ಟವಾಗುತ್ತಿರುವುದು ಒಂದೆಡೆಯಾದರೆ, ಕೆಲವು ಸಂದರ್ಭದಲ್ಲಿ ಕೋವಿಡ್ ಟೆಸ್ಟ್ ಮಾಡುವ ಸಿಬ್ಬಂದಿ ಇದ್ದರೂ ಟೆಸ್ಟ್ ಮಾಡದೆ ಸುಮ್ಮನೆ ಪ್ರಯಾಣಿಕರನ್ನು ನೋಡುತ್ತಾ ನಿಂತಿರುತ್ತಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರು ಈ ನಿಲ್ದಾಣದಲ್ಲೇ ಇಳಿದು ಯಾವುದೇ ಟೆಸ್ಟ್ ಇಲ್ಲದೇ ಟ್ಯಾಕ್ಸಿ, ಬಸ್, ಆಟೋಗಳ ಮೂಲಕ ಮನೆಗಳಿಗೆ ತಲುಪುತ್ತಿದ್ದಾರೆ.
ಇನ್ನು ಟೆಸ್ಟ್ ಮಾಡುವ ಸಮಯಕ್ಕೆ ಬರುವ ಜನ ಎಲ್ಲಿ ನಮಗೂ ಕೊರೊನಾ ಟೆಸ್ಟ್ ಮಾಡುತ್ತಾರೆ ಎಂದು ಫ್ಲಾಟ್ ಫಾರ್ಮ್ಗಳಲ್ಲೆ ಕುಳಿತುಕೊಂಡಿರುತ್ತಾರೆ. ಸ್ವಲ್ಪ ಸಮಯದ ನಂತರ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಕಣ್ಣುತಪ್ಪಿಸಿ ಓಡಿಹೋಗುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಜನಕ್ಕೆ 3ನೇ ಅಲೆ ಆತಂಕ ಎದುರಾಗಿದೆ.
ಒಂದೇ ಸಮಯಕ್ಕೆ ಸಾವಿರಾರು ಜನರು ಬಂದರೆ ಹೇಗೆ ಟೆಸ್ಟ್ ಮಾಡುವುದು ಎಂದು ಕೊರೊನಾ ನಿಯಮಗಳನ್ನ ಗಾಳಿಗೆ ತೂರುತ್ತಿದ್ದಾರೆ. ನಗರದಲ್ಲಿ ಆರೋಗ್ಯಾಧಿಕಾರಿಗಳು ಇನ್ನಾದರೂ ಎಚ್ಚರಿಕೆ ವಹಿಸಿ ರೈಲು ನಿಲ್ದಾಣಕ್ಕೆ ಬರುವ ಎಲ್ಲರಿಗೂ ಕಡ್ಡಾಯವಾಗಿ ಟೆಸ್ಟ್ ಮಾಡುವ ಮೂಲಕ ಕೊರೊನಾ ಹರಡದಂತೆ ತಡೆಗಟ್ಟಲು ಕ್ರಮಕೈಗೊಳ್ಳಬೇಕಾಗಿದೆ.