ಬೆಂಗಳೂರು: ಬಿಬಿಎಂಪಿ ಬಜೆಟ್ ಗಾತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಮೇಯರ್ ಗಂಗಾಂಬಿಕೆ ಪ್ರತಿಕ್ರಿಯಿಸಿದ್ದು, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎನ್ನುವ ಮೂಲಕ ವಿಚಾರಕ್ಕೆ ತೆರೆ ಎಳೆದಿದ್ದಾರೆ.
ಪಾಲಿಕೆ 12,958 ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡನೆಗೆ ಸರ್ಕಾರಕ್ಕೆ ಅನುಮೋದನೆ ಕಳಿಸಿತ್ತು. ಆದರೆ ಅವೈಜ್ಞಾನಿಕ ಬಜೆಟ್ ಅನುಷ್ಠಾನ ಕಷ್ಟ ಸಾಧ್ಯ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಹೀಗಾಗಿ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಹಾಗೂ ಹಣಕಾಸು ಇಲಾಖೆ ಆಯುಕ್ತರ ಪ್ರಸ್ತಾವನೆಗೆ ಒಪ್ಪಿ ಬಜೆಟ್ ಗಾತ್ರವನ್ನು 9 ಸಾವಿರ ಕೋಟಿ ರೂಪಾಯಿಗೆ ಇಳಿಸಿದೆ. ಇದು ಪಾಲಿಕೆ ಆಡಳಿತ ಪಕ್ಷದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಬಿಜೆಪಿ ವಿರೋಧ ಪಕ್ಷದ ನಾಯಕರಾದ ಪದ್ಮನಾಭ ರೆಡ್ಡಿ ದೂರಿದ್ದಾರೆ.
ಆದರೆ ಮೇಯರ್ ಗಂಗಾಂಬಿಕೆ ಅವರು ಸರ್ಕಾರ ಬಜೆಟ್ ಬಗ್ಗೆ ಇನ್ನೂ ಏನೂ ಕ್ರಮ ಕೈಗೊಂಡಿಲ್ಲ. ಬಜೆಟ್ ಗಾತ್ರ ಕುಗ್ಗಿಸಿರುವ ಬಗ್ಗೆಯೂ ನನಗೆ ಅಧಿಕೃತ ಮಾಹಿತಿ ಬಂದಿಲ್ಲ. ಏನು ಕಳಿಸುತ್ತಾರೋ ಅದರ ಮೇಲೆ ನಾನು ಮಿರ್ಧಾರ ಮಾಡಿಕೊಳ್ಳುತ್ತೇವೆ. ಪ್ರತಿ ಬಾರಿ ಅಪ್ರೂವಲ್ಗೆ ಕಳುಹಿಸಿದಾಗ ಕಮೀಷನರ್ನ ಸಲಹೆ ಕೇಳುವುದು ಸರ್ಕಾರದ ನಿಯಮವಾಗಿದೆ ಎಂದಿದ್ದಾರೆ.
ಒಂದು ವೇಳೆ ಬಜೆಟ್ ಗಾತ್ರದ ಒಟ್ಟು ಮೊತ್ತದಲ್ಲಿ ನಾಲ್ಕು ಸಾವಿರ ಕೋಟಿಯಷ್ಟು ಕಡಿತಗೊಳಿಸಿದರೆ ಪಾಲಿಕೆ ಮತ್ತೆ ಬಜೆಟ್ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಆದರೆ ಬಜೆಟ್ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಇನ್ನಷ್ಟೆ ನಡೆಯಬೇಕಿದೆ ಎಂಬುದು ಪಾಲಿಕೆ ಆಡಳಿತ ಪಕ್ಷ ಸಮಜಾಯಿಷಿ ನೀಡಿದೆ.ಆದರೆ ಪಾಲಿಕೆಯ ಆದಾಯಕ್ಕೂ ಮೀರಿದ ಬಜೆಟ್ನಲ್ಲಿರುವ ಕಾಮಗಾರಿಗಳನ್ನು ಜಾರಿಗೊಳಿಸುವುದು ಅಸಾಧ್ಯವಾಗಿದೆ.