ಆನೇಕಲ್: ಎಲೆಕ್ಟ್ರಾನಿಕ್ ಸಿಟಿಯಿಂದ ತುಮಕೂರು ರಸ್ತೆಯವರೆಗೂ ನೈಸ್ ರೋಡ್ ಸಂಪೂರ್ಣ ಹದಗೆಟ್ಟಿದ್ದು, ಈ ಹಿನ್ನೆಲೆ ಡಿಸಿಎಂ ಅಶ್ವತ್ಥ್ ನಾರಾಯಣ್, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಪ್ಪ ಹಾಗೂ ನೈಸ್ ರಸ್ತೆಯ ಮುಖ್ಯಸ್ಥ ಅಶೋಕ್ ಖೇಣಿ ಅವರು ನೈಸ್ ರಸ್ತೆಯಲ್ಲಿ ಸಂಚರಿಸಿ ವಾಸ್ತವ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ್, ಈಗಾಗಲೇ ನೈಸ್ ರಸ್ತೆಯಲ್ಲಿನ ಗುಂಡಿಗಳ ಬಗ್ಗೆ ಖೇಣಿ ಅವರ ಗಮನಕ್ಕೆ ತರಲಾಗಿದ್ದು, ಬಹುತೇಕ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ. ಉಳಿದವುಗಳನ್ನು ಶೀಘ್ರವಾಗಿ ಮುಚ್ಚಲಿದ್ದಾರೆ ಎಂದರು.
ಕಳೆದ ವಾರದ ಉದ್ಯಮಿಗಳ ಜೊತೆ ನಡೆದ ಸಭೆಯಲ್ಲಿಯೂ ನೈಸ್ ರಸ್ತೆಯಲ್ಲಿನ ಗುಂಡಿಗಳ ಬಗ್ಗೆ ಮತ್ತು ಸುಂಕ ವಸೂಲಿ ಕೇಂದ್ರಗಳಲ್ಲಿನ ಅವ್ಯವಸ್ಥೆ ಬಗ್ಗೆ ಗಮನ ಸೆಳೆದು ಕೂಡಲೇ ಖೇಣಿಯವರಿಗೆ ತಿಳಿಸಿದ್ದು, ಕೂಡಲೇ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಜೊತೆಗೆ ಸಿಮೆಂಟ್ ಕಾಂಕ್ರೀಟ್ ರಸ್ತೆ ಸಹ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದಾರೆ ಎಂದರು.