ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆಗೆ ಸೋಮವಾರ ಬಿಬಿಎಂಪಿ ಅವಕಾಶ ನೀಡಿದ್ದು, ಇದರ ಹಿನ್ನೆಲೆ ಮಂಗಳವಾರ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಈ ವಿಷಯವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು.
ಚುನಾವಣಾ ಆಯೋಗದ ಸೂಚನೆಯಂತೆ ಸೋಮವಾರದಿಂದ ಮೂರು ದಿನಗಳ ಕಾಲ ಮಿಂಚಿನ ನೋಂದಣಿ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಲಾಗಿದೆ. 18 ವರ್ಷಕ್ಕೆ ಮೇಲ್ಪಟ್ಟವರು ಚುನಾವಣೆ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಬಿಬಿಎಂಪಿ ವ್ಯಾಪ್ತಿಯ ಪ್ರತಿಯೊಂದು ವಾರ್ಡ್ನಲ್ಲೂ ನೋಂದಣಿ ಮಾಡಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದಲ್ಲದೆ ಚುನಾವಣಾ ಪಟ್ಟಿಯಲ್ಲಿ ಹೆಸರು ಬಿಟ್ಟವರು ಹಾಗೂ ಹೆಸರು ತಿದ್ದುಪಡಿ ಇದ್ದವರು ಸಹ ಈ ವೇಳೆ ಅಪ್ಲಿಕೇಶನ್ ಹಾಕಿ ಸರಿಪಡಿಸಿಕೊಳ್ಳಬಹುದಾಗಿದೆ. ವೋಟರ್ಸ್ ಹೆಲ್ಪ್ ಲೈನ್ ಆ್ಯಪ್ ಹಾಗೂ ಎನ್ವಿಎಸ್ಪಿ ಪೋರ್ಟಲ್ ಮುಖಾಂತರವೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.
ಜನವರಿ 6ರಿಂದ 8ರವರೆಗೂ ಮಿಂಚಿನ ನೋಂದಣಿ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಹೊಸ ಮತದಾರರಲ್ಲಿ ಬಿಬಿಎಂಪಿ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕುಮಾರ್ ಮನವಿ ಮಾಡಿದರು. ಅಲ್ಲದೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾದ ಮತದಾರರಿಗೆ ವೋಟರ್ ಐಡಿ ಬದಲು ಸ್ಮಾರ್ಟ್ ಕಾರ್ಡ್ ನೀಡಲಾಗುವುದು.
ಜೊತೆಗೆ ತಿದ್ದುಪಡಿ ಮಾಡಿಸಿಕೊಂಡವರೆಗೂ ಸಹ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಒಂದು ವೇಳೆ ಇದಕ್ಕೂ ಮುಂಚೆ ಸ್ಮಾರ್ಟ್ ಕಾರ್ಡ್ ಪಡೆದು ಕಳೆದು ಹೋಗಿದ್ದರೆ ಬೆಂಗಳೂರು ಒನ್ ಕೇಂದ್ರದಲ್ಲಿ ಮೂವತ್ತು ರೂಪಾಯಿ ಪಾವತಿಸಿ ಹೊಸ ವೋಟರ್ ಐಡಿ ಸ್ಮಾರ್ಟ್ ಕಾರ್ಡ್ ಪಡೆಯಬಹುದು ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.