ಬೆಂಗಳೂರು: ಬ್ರಿಟನ್ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ರೂಪಾಂತರಿ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನ ಮೂವರು ನಿವಾಸಿಗಳಿಗೆ ಈ ಹೊಸ ಪ್ರಭೇದದ ಸೋಂಕು ತಗುಲಿರುವುದು ದೃಢವಾಗಿದೆ.
ಸಿಲಿಕಾನ್ ಸಿಟಿಯ ವಸಂತಪುರದಲ್ಲಿ ಸುಮಾರು 25 ಫ್ಲಾಟ್ಗಳಿರುವ ಅಪಾರ್ಟ್ಮೆಂಟ್ನಲ್ಲಿ ಮೂವರಿಗೆ ರೂಪಾಂತರಿ ಕೊರೊನಾ ದೃಢಪಟ್ಟಿರುವ ಹಿನ್ನೆಲೆ ಅಕ್ಕಪಕ್ಕದ ನಿವಾಸಿಗಳಿಗೂ ಕ್ವಾರೆಂಟೈನ್ ಮಾಡಲಾಗುತ್ತಿದೆ. ಇನ್ನು ಮುಂಜಾಗೃತ ಕ್ರಮವಾಗಿ ವಯೋವೃದ್ಧರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.
ಅಪಾರ್ಟ್ಮೆಂಟ್ನಲ್ಲಿದ್ದ ವಯೋವೃದ್ಧರನ್ನು 2 ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುತ್ತಿದ್ದು, ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲಿರುವ ಅಕ್ಷಯ ಆಸ್ಪತ್ರೆ ಹಾಗೂ ಈಸ್ಟ್ ಎಂಡ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಪ್ರತಿಯೊಬ್ಬರಿಗೂ ವಿಶೇಷ ಕೊಠಡಿಯಲ್ಲಿ ಇರಿಸಿ ನಿಗಾ ಇಡಲಾಗುತ್ತಿದೆ.
ಸದ್ಯ ಈ ಎಲ್ಲರಿಗೂ ಕೊರೊನಾ ನೆಗಟಿವ್ ರಿಪೋರ್ಟ್ ಬಂದಿದೆ, ಆದರೆ ಮುಂಜಾಗ್ರತ ಕ್ರಮವಾಗಿ ಈ ಅಪಾರ್ಟ್ಮೆಂಟ್ ನಿವಾಸಿಗಳನ್ನು ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಆರೋಗ್ಯಧಿಕಾರಿಗಳು ತಿಳಿಸಿದ್ದಾರೆ.