ಬೆಂಗಳೂರು : ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ರಮ ಮರಳು ಸಾಗಣೆ ತಡೆಯಲು ಹೋದ ಪೊಲೀಸ್ ಕಾನ್ಸ್ಟೇಬಲ್ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಗೃಹ ಸಚಿವ ಡಾ ಜಿ ಪರಮೇಶ್ವರ್ ನಿರಾಕರಿಸಿದ್ದು, ಸರ್ಕಾರದ ಉತ್ತರ ವಿರೋಧಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದರಿಂದಾಗಿ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿ ಕಲಾಪವನ್ನು ನಾಳೆಗೆ ಮುಂದೂಡಿಕೆ ಮಾಡಲಾಯಿತು.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330 ರ ಅಡಿ ಕಲ್ಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ರೈತನೊಬ್ಬ ಮರಳು ಸಾಗಾಣಿಕೆ ಮಾಡುವ ವೇಳೆ ತಡೆಯಲು ಬಂದ ಕಾನ್ಸ್ಟೇಬಲ್ ಮೃತಪಟ್ಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಬಿಜೆಪಿ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಶಶಿಲ್ ನಮೋಶಿ, ರವಿಕುಮಾರ್, ತಳವಾರ್ ಸಾಬಣ್ಣ ಪ್ರಸ್ತಾಪಕ್ಕೆ ಉತ್ತರ ನೀಡಿದ ಗೃಹ ಸಚಿವರು, ಮರಳು ದಂಧೆ ಹೊಸದೇನಲ್ಲ, ಎಲ್ಲ ಸರ್ಕಾರದ ಅವಧಿಯಲ್ಲೂ ನಿರಂತರವಾಗಿ ನಡೆಯುತ್ತಲೇ ಇದೆ. ರಾಜ್ಯದ ಎಲ್ಲ ಕಡೆ ಇದೆ.
ಜೇವರ್ಗಿ ತಾಲೂಕಿನ ನೆಲೋಗಿ ಠಾಣಾ ವ್ಯಾಪ್ತಿಯಲ್ಲಿ ಮರಳು ತುಂಬಿ ಬರುತ್ತಿರುವ ಮಾಹಿತಿ ಸಿಕ್ಕಾಗ ಪೊಲೀಸರು ಹೋಗುತ್ತಾರೆ. ಮಫ್ತಿಯಲ್ಲೂ ಕೆಲವೊಮ್ಮೆ ಹೋಗುತ್ತಾರೆ. ಇದೇ ರೀತಿ ಟ್ರ್ಯಾಕ್ಟರ್ ನಿಲ್ಲಿಸುವಂತೆ ಪೊಲೀಸರು ಕೇಳಿದಾಗ ಟ್ರ್ಯಾಕ್ಟರ್ ನಿಲ್ಲಿಸಿಲ್ಲ. ಪ್ರಯತ್ನ ನಡೆಸಿದ ಪೊಲೀಸ್ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಬಗ್ಗೆಯೂ ಮಾತನಾಡಬೇಕಲ್ಲ, ಪೊಲೀಸ್ ಕಾನ್ಸ್ಟೇಬಲ್ ಸತ್ತಾಗ ತನಿಖೆ ನಡೆಸಲು ಪೊಲೀಸರು ಬರುತ್ತಾರೆ. ಚಾಕುವಿನಿಂದ ಚುಚ್ಚಲು ಬಂದಾಗ ಪೊಲೀಸರು ಏನು ಮಾಡಬೇಕು ಹೇಳಿ? ಎಂದು ಪ್ರಶ್ನಿಸಿದರು.
ನ್ಯಾಯಾಂಗ ತನಿಖೆಗೆ ವಹಿಸುವ ಅಗತ್ಯವಿಲ್ಲ: ಸಾಯಬಣ್ಣ ಚಾಕುವಿನಿಂದ ತಿವಿಯಲು ಬಂದು ತಪ್ಪಿಸಿಕೊಳ್ಳಲು ಮುಂದಾದಾಗ ಗಾಳಿಯಲ್ಲಿ ಗುಂಡು ಹಾರಿಸಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಅವನನ್ನು ಸಾಯಿಸಿಲ್ಲ, ಸ್ಥಳೀಯವಾಗಿ ಇಟ್ಟರೆ ಗಲಾಟೆ ನಡೆಯುವ ಸಾಧ್ಯತೆ ಕಾರಣಕ್ಕೆ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಇದನ್ನ ಬಹಳ ದೊಡ್ಡದಾಗಿ ಪರಿಗಣಿಸಬೇಕಿಲ್ಲ. ಇಂತಹ ಎಲ್ಲ ಘಟನೆ ನ್ಯಾಯಾಂಗ ತನಿಖೆ ಎಂದರೆ ಹೇಗೆ? ಜೈನಮುನಿ ಕೇಸ್ ಸಿಬಿಐಗೆ ಕೊಡಿ ಎಂದಿರಿ. ಆದರೆ ನಮ್ಮ ಪೊಲೀಸರೇ ಸಮರ್ಥರಿದ್ದಾರೆ ಎಂದಿದ್ದೆವು. ಅದರಂತೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವ ಅಗತ್ಯವಿಲ್ಲ. ಹಾಗಾಗಿ, ಕೊಡಲ್ಲ ಎಂದು ಬಿಜೆಪಿ ಸದಸ್ಯರ ಬೇಡಿಕೆಯನ್ನು ತಿರಸ್ಕರಿಸಿದರು.
ಗೃಹ ಸಚಿವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಶಶಿಲ್ ನಮೋಶಿ, ಮರಳು ಮಾಫಿಯಾಗೆ ಸಾಯಬಣ್ಣ ವಿರುದ್ಧ ಇಲ್ಲಿ ದಾರಿ ತಪ್ಪಿಸಿದ್ದಾರೆ. ರೌಡಿಶೀಟರ್ ಅಲ್ಲದ ವ್ಯಕ್ತಿಗೆ ರೌಡಿ ಶೀಟರ್ ಮಾಡಿದ್ದಾರೆ. ಕೋಳಿ ಅಪಘಾತ ಪ್ರಕರಣ ಉಲ್ಲೇಖಿಸಿ 10 ಜನರ ಮೇಲೆ ರೌಡಿಶೀಟರ್ ಹಾಕಿದ್ದಾರೆ. ಅದನ್ನು ಅಲೋಕ್ ಕುಮಾರ್ ಮುಂದೆ ಒಯ್ದು ಕೇಳಿದಾಗ ಅವರು ಬೈದು ವಾಪಸ್ ಪಡೆಯಿರಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಆದರೆ 8 ಜನರ ಮೇಲಿನ ರೌಡಿ ಶೀಟರ್ ವಾಪಸ್ ಪಡೆದು ಇಬ್ಬರ ಮೇಲೆ ಮಾತ್ರ ಉಳಿಸಿಕೊಂಡಿದ್ದಾರೆ. ಕೋಳಿ ಕೊಂದಿದ್ದಕ್ಕೆ ರೌಡಿಶೀಟರ್ ಮಾಡುತ್ತಾರಾ? ಪಿಎಸ್ಐ, ಸಿಪಿಐ ಎಲ್ಲರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಪೊಲೀಸರ ಮೇಲೆ ಪೊಲೀಸರೇ ತನಿಖೆ ಮಾಡಿಸುತ್ತಾರಾ? ಸತ್ಯ ಹೊರಬರುತ್ತಾ? ಹಾಗಾಗಿ ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಆಗ್ರಹಿಸಿದರು.
ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಅಕ್ರಮ ಮರಳು ಸಾಗಾಣಿಕೆ ಮಾಡಿದವರ ಮೇಲೆ ಎಫ್ಐಆರ್ ಹಾಕಬೇಕು. ಆದರೆ ಮಾಲೀಕನ ಮೇಲೆ ಯಾಕೆ ಎಫ್ಐಆರ್ ಹಾಕಿದ್ದೀರಿ. ಸ್ಥಳದಲ್ಲೇ ಇಲ್ಲದ ಸಾಯಬಣ್ಣ ಕರ್ಜಗಿ ಕಾಲಿಗೆ ಶೂಟೌಟ್ ಮಾಡಿದ್ದೇಕೆ? ಕೋರ್ಟ್ಗೆ ಯಾಕೆ ಹಾಜರುಪಡಿಸಿಲ್ಲ. ಸಾಯಿಬಣ್ಣ ರೌಡಿಶೀಟರ್ ಅಲ್ಲ. ಈಗ ರೌಡಿಶೀಟರ್ ಎಂದು ಮಾಡಿ ಕಣ್ಣಿಗೆ ಬಟ್ಟೆಕಟ್ಟಿ ಓಡಿಸಿ ಶೂಟೌಟ್ ಮಾಡಿದಿರಿ? ಹಾಗಾಗಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇಡೀ ಪ್ರಕರಣವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ: ಇದಕ್ಕೆ ಉತ್ತರಿಸಿದ ಪರಮೇಶ್ವರ್, ಪೊಲೀಸರು ತಡೆದಾಗ ಟ್ರ್ಯಾಕ್ಟರ್ ಅನ್ನು ನಿಲ್ಲಿಸಿದ್ದರೆ ದಂಡ ಹಾಕಿ ಬಿಡುತ್ತಿದ್ದರು. ಆದರೆ, ಇಲ್ಲಿ ನಮ್ಮ ಪೊಲೀಸ್ ಕಾನ್ಸ್ಟೇಬಲ್ ಮೃತರಾಗಿದ್ದಾರೆ. ತನಿಖೆ ವೇಳೆ ಸಾಯಬಣ್ಣ ಟ್ರ್ಯಾಕ್ಟರ್ ಮಾಲೀಕ ಎಂದು ಆತನ ವಿಚಾರಣೆ ನಡೆಸಲು ಮುಂದಾದಾಗ ಚಾಕು ತೆಗೆದು ಇರಿಯಲು ಯತ್ನಿಸಿದ್ದರಿಂದ ಕಾಲಿಗೆ ಶೂಟ್ ಮಾಡಲಾಯಿತು. ಇಡೀ ಪ್ರಕರಣವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಹಾಗಾಗಿ ನ್ಯಾಯಾಂಗ ತನಿಖೆಗೆ ವಹಿಸಲ್ಲ ಎಂದರು.
ಸರ್ಕಾರದ ಉತ್ತರ ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಪೊಲೀಸರು ಗೃಹ ಸಚಿವರ ದಾರಿ ತಪ್ಪಿಸಿದ್ದಾರೆ. ಪೊಲೀಸ್ ತನಿಖೆಯ ಮೇಲೆ ನಮಗೆ ವಿಶ್ವಾಸ ಇಲ್ಲ. ಹಾಗಾಗಿ ನ್ಯಾಯಾಂಗ ತನಿಖೆಗೆ ವಹಿಸಬೇಕು ಅಲ್ಲಿಯವರೆಗೂ ಧರಣಿ ನಿಲ್ಲಿಸಲ್ಲ ಎಂದರು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಮತ್ತೊಮ್ಮೆ ಗೃಹ ಸಚಿವರ ಅಭಿಪ್ರಾಯ ಕೇಳಿದರೂ ಅವರು ನ್ಯಾಯಾಂಗ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಂದರು.
ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಘೋಷಣೆ ಕೂಗಿದರು ಬಿಜೆಪಿ ಸದಸ್ಯರ ಧರಣಿಯಿಂದ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಿದರು.
ಇದನ್ನೂ ಓದಿ: cloud seeding: ಮೋಡ ಬಿತ್ತನೆ ತಂತ್ರಜ್ಞಾನದ ಕುರಿತು ಚರ್ಚೆ.. ಆಡಳಿತ ಪಕ್ಷದ ಶಾಸಕರ ನಡುವೆಯೇ ಪರ-ವಿರೋಧ