ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ವೈಟ್‌ಫೀಲ್ಡ್-ಕೆ.ಆರ್.ಪುರ ಮೆಟ್ರೋ ರೈಲು ಮಾರ್ಗದಲ್ಲಿ ಭಾನುವಾರ ಬೆಳಗ್ಗೆ 7ರಿಂದ ವಾಣಿಜ್ಯ ಸಂಚಾರ ಆರಂಭವಾಗಿದೆ. ಭಾನುವಾರ ಸುಮಾರು 17 ಸಾವಿರ ಜನ ಪ್ರಯಾಣ ಮಾಡಿದ್ದಾರೆ. ಮಾ.30ರಿಂದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್ (ಎನ್‌ಸಿಎಂಸಿ) ಪ್ರಯಾಣಿಕರು ಪಡೆಯಬಹುದು ಎಂದು ನಮ್ಮ ಮೆಟ್ರೋ ಸಂಸ್ಥೆ ತಿಳಿಸಿದೆ.
ನಿತ್ಯ ಬೆಳಗ್ಗೆ 5ರಿಂದ ರಾತ್ರಿ 11ರವರೆಗೆ ಮೆಟ್ರೋ ರೈಲಿನ ಸೇವೆ ಲಭ್ಯವಿದೆ. ರಾತ್ರಿ 11ಕ್ಕೆ ಎರಡೂ ನಿಲ್ದಾಣದಲ್ಲಿ ಕೊನೆಯ ಮೆಟ್ರೋ ರೈಲುಗಳು ಸಂಚರಿಸಲಿವೆ. ಪ್ರಯಾಣಿಕರು ಪ್ರತ್ಯೇಕ ಟೋಕನ್, ಮೊಬೈಲ್ ಕ್ಯೂಆರ್ ಟಿಕೆಟ್, ಸ್ಮಾರ್ಟ್ ಕಾರ್ಡ್ ಬಳಸಿ ಟಿಕೆಟ್ ಖರೀದಿಸಿ ಪ್ರಯಾಣ ಮಾಡಬಹುದು. 10ರಿಂದ 12 ನಿಮಿಷಕ್ಕೊಂದರಂತೆ ರೈಲುಗಳು ಸಂಚರಿಸುತ್ತಿವೆ ಎಂದು ಹೇಳಿದೆ.
ವೈಟ್‌ಫೀಲ್ಡ್-ಕೆ.ಆರ್.ಪುರ ಮಾರ್ಗದ ಕಾಮಗಾರಿ ಸಾಕಷ್ಟು ಸವಾಲಿನಿಂದ ಕೂಡಿತ್ತು. ಪ್ರತಿದಿನ ಇಲ್ಲಿ 1400 ನೌಕರರು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಮೆಟ್ರೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಮೆಟ್ರೋ ಉದ್ಘಾಟನೆ ಮಾಡಿದ್ದಾರೆ. ಈ ಮಾರ್ಗದ ಮುಂದಿನ 2 ಕಿ.ಮೀ.ವರೆಗಿನ ಬೈಯ್ಯಪ್ಪನಹಳ್ಳಿವರೆಗಿನ ಕಾಮಗಾರಿ ಜೂನ್ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಇದು ಕೂಡ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.
ಶನಿವಾರ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಪರಿಚಯ ಆಗಿದೆ. ಮಾ.30ರಿಂದ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಎನ್‌ಸಿಎಂಸಿ ಕಾರ್ಡನ್ನು ಖರೀದಿಸಬಹುದು ಎಂದು ಅಂಜುಮ್ ಪರ್ವೇಜ್ ಹೇಳಿದ್ದಾರೆ.
6 ನಿಲ್ದಾಣಗಳಿಗೆ ಮರುನಾಮಕರಣ: ಈ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳಿವೆ. ಕನ್ನಡಿಗರ ಒತ್ತಾಸೆ ಮೇರೆಗೆ ಕೆ.ಆರ್. ಪುರಂ ನಿಲ್ದಾಣವನ್ನು ಕೃಷ್ಣರಾಜಪುರ (ಕೆ.ಆರ್.ಪುರ) ಎಂದು ಬದಲಿಸಲಾಗಿದೆ. ಇನ್ನು, ಮಹದೇವಪುರ ಮೆಟ್ರೋ ನಿಲ್ದಾಣವನ್ನು ಸಿಂಗಯ್ಯಪ್ಪನಪಾಳ್ಯ ನಿಲ್ದಾಣ, ಹೂಡಿ ಜಂಕ್ಷನ್ ಮೆಟ್ರೋ ನಿಲ್ದಾಣವನ್ನು ಹೂಡಿ, ಕಾಡುಗೋಡಿ ಮೆಟ್ರೋ ನಿಲ್ದಾಣವನ್ನು ಕಾಡುಗೋಡಿ ಟ್ರೀ ಪಾರ್ಕ್ ಹಾಗೂ ಚನ್ನಸಂದ್ರವನ್ನು, ಹೊಪ್ ಫಾರ್ಮ್ ಚನ್ನಸಂದ್ರ, ವೈಟ್‌ಫೀಲ್ಡ್ ಅನ್ನು ವೈಟ್‌ಫೀಲ್ಡ್ (ಕಾಡುಗೋಡಿ) ಎಂದು ಮರುನಾಮಕರಣ ಮಾಡಲಾಗಿದೆ. ಉಳಿದಂತೆ ನಲ್ಲೂರು ಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಗರುಡಾಚಾರಪಾಳ್ಯ, ಪಟ್ಟಂದೂರು ಅಗ್ರಹಾರ, ಶ್ರೀ ಸಾಯಿ ಆಸ್ಪತ್ರೆ ನಿಲ್ದಾಣಗಳಲ್ಲಿ ನಮ್ಮ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ:ವೈಟ್ ಫೀಲ್ಡ್- ಕೃಷ್ಣರಾಜಪುರ ಮೆಟ್ರೊ ಮಾರ್ಗ ಉದ್ಘಾಟನೆ.. ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ ಮೋದಿ
ದಿಲ್ಲಿ ಮೆಟ್ರೋ ವಿಮಾನ ನಿಲ್ದಾಣ ಮಾರ್ಗದಲ್ಲಿ 2020ರ ಡಿಸೆಂಬರ್‌ನಲ್ಲೇ ಮೊಬಿಲಿಟಿ ಕಾರ್ಡ್ ಬಳಕೆಗೆ ಚಾಲನೆ ನೀಡಲಾಗಿದೆ. ಎನ್‌ಸಿಎಂಸಿ ಕಾರ್ಡ್ ಅನ್ನು ಕೇವಲ ನಮ್ಮ ಮೆಟ್ರೋ ಮಾತ್ರವಲ್ಲದೆ ದೇಶದಲ್ಲಿರುವ ಇನ್ಯಾವುದೇ ರಾಜ್ಯದ ಮೆಟ್ರೋದಲ್ಲಿಯೂ ಬೇಕಾದರೂ ಬಳಸಬಹುದಾಗಿದೆ. ಈ ಕಾರ್ಡ್‌ನ ಸಹಾಯದಿಂದಾಗಿ ಜನರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಕಾರ್ಯವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುತ್ತದೆ. ಬಸ್, ಪಾರ್ಕಿಂಗ್, ಎಲ್ಲಾ ಕಡೆಯ ಮೆಟ್ರೋ ಸಂಪರ್ಕ, ರೀಟೇಲ್ ಶಾಪಿಂಗ್‌ಗಳಲ್ಲಿ ಈ ಒಂದೇ ಕಾರ್ಡ್ ಮೂಲಕ ವ್ಯವಹರಿಸಬಹುದಾಗಿದೆ.