ಬೆಂಗಳೂರು : ಮಾದಕವಸ್ತು ಮಾರಟದ ಜಾಲದ ವಿರುದ್ಧ ಭೇಟೆ ಮುಂದುವರೆಸಿರುವ ಎನ್ಸಿಬಿ ಅಧಿಕಾರಿಗಳು ಪಾರ್ಸೆಲ್ ಬಾಕ್ಸ್ ಗಳಲ್ಲಿ ಡ್ರಗ್ಸ್ ತಯಾರಿಸಲು ಕಚ್ಚಾವಸ್ತು ಮಾರಾಟ ಮಾಡುತ್ತಿದ್ದ ದಕ್ಷಿಣ ಅಫ್ರಿಕಾ ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೌತ್ ಆಫ್ರಿಕಾ ಮೂಲದ ಮೋಸ್ಟ್ ವಾಂಟೆಡ್ ಡ್ರಗ್ ಡೀಲರ್ ಆಗಿರುವ ಬೆಂಜಮಿನ್ ಸಂಡೆ ಅಲಿಯಾಸ್ ಅಂಟೋನಿ ಬಂಧಿತನಾಗಿದ್ದು, ಈತನಿಂದ ಒಂದೂವರೆ ಕೋಟಿ ಮೌಲ್ಯದ 968 ಗ್ರಾಂ ಆಂಫೆಟಮೈನ್ ಡ್ರಗ್ಸ್ ಹಾಗೂ 2 ಕೆ.ಜಿ 900 ಗ್ರಾಂ ಡ್ರಗ್ಸ್ ತಯಾರಿಸುವ ಕಚ್ಚಾ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಬಂಧಿತ ಆರೋಪಿ ಬೆಂಜಮಿನ್ ಚೆನ್ನೈ ಮೂಲದ ಯುವತಿಯನ್ನ ಮದುವೆಯಾಗಿ ಭಾರತದಲ್ಲೇ ಉಳಿದುಕೊಂಡಿದ್ದ. ಈತನ ಪತ್ನಿಯು ಡ್ರಗ್ಸ್ ಚಟುವಟಿಕೆಗಳಿಗೆ ಸಾಥ್ ನೀಡುತ್ತಿದ್ದಳು ಎನ್ನಲಾಗಿದೆ. ಈತನ ವಿರುದ್ಧ ಚೆನ್ನೈನಲ್ಲಿ ಎರಡು ಹಾಗೂ ಆಸ್ಟ್ರೇಲಿಯಾದಲ್ಲಿ ಎರಡು ಪ್ರಕರಣ ದಾಖಲಾಗಿವೆ.
ಈತ ವಿವಿಧ ದೇಶಗಳಿಗೆ ಡ್ರಗ್ಸ್ ರಫ್ತು ಮಾಡುತ್ತಿದ್ದ ಹಾಗೇ ಸಿಂಥೆಟಿಕ್ ಡ್ರಗ್ಸ್ ಆಮದು ಕೂಡ ಮಾಡಿಕೊಳ್ಳುತ್ತಿದ್ದ. ಮುಂಬೈನಲ್ಲಿ ಡ್ರಗ್ಸ್ ಶೇಖರಿಸಿಟ್ಟಿದ್ದ. ಬೆಂಗಳೂರಿನಿಂದ ಮುಂಬೈಗೆ ಬಸ್ ನಲ್ಲಿ ಹೋಗುವಾಗ ಡಿ.23 ರಂದು ಬಂಧಿಸಲಾಗಿದೆ.
ಹೊಸ ವರ್ಷಾಚರಣೆ ಹಿನ್ನೆಲೆ ಹಲವು ದೇಶಗಳಿಗೆ ಡ್ರಗ್ಸ್ ಸಪ್ಲೈ ಮಾಡಲು ರೆಡಿಯಾಗಿದ್ದ. ಅಲ್ಲದೇ ವಿದೇಶದಿಂದ ಹೊಸ ವರ್ಷಕ್ಕೆ ದೇಶಕ್ಕೆ ಸಿಂಥೆಟಿಕ್ ಡ್ರಗ್ಸ್ ಆಮದು ಮಾಡಿಕೊಳ್ಳು ಯೋಜನೆ ರೂಪಿಸಿದ್ದ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎನ್ಸಿಬಿ ಬೆಂಗಳೂರು ವಲಯ ನಿರ್ದೇಶಕ ಅಮಿನ್ ಘಾವಾಟೆ ತಿಳಿಸಿದ್ದಾರೆ.