ಯಲಹಂಕ(ಬೆಂಗಳೂರು): ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ಇದೇ ಫೆಬ್ರವರಿ 8 ರಿಂದ 12ರವರೆಗೆ 5 ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ-2021 ಅನ್ನು ಹೆಸರಘಟ್ಟದಲ್ಲಿ ಆಯೋಜಿಸಲಾಗಿದೆ.
ಮೇಳದಲ್ಲಿ ಐಐಎಚ್ಆರ್ ಅಭಿವೃದ್ಧಿ ಪಡಿಸಿದ 54 ವಿವಿಧ ತೋಟಗಾರಿಕಾ ಬೆಳೆಗಳನ್ನು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶನಕ್ಕೆ ಇಡಲಿದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಧೆ ತೋಟಗಾರಿಕಾ ಬೆಳೆಗಳ ಸಂಶೋಧನೆ ಮಾಡುವ ದೇಶದ ಪ್ರತಿಷ್ಠಿತ ಸಂಸ್ಥೆಯಾಗಿದೆ. ಬೆಂಗಳೂರಿನಿಂದ 25 ಕಿ.ಮೀ ದೂರದ ಹೆಸರಘಟ್ಟದ ವಿಶಾಲವಾದ ಜಾಗದಲ್ಲಿ ಸಂಶೋಧನಾ ಸಂಸ್ಥೆ ಇದ್ದು, ಈಗಾಗಲೇ ಐಐಎಚ್ಆರ್ ಸಂಸ್ಥೆ 54 ವಿವಿಧ ತೋಟಗಾರಿಕಾ ಬೆಳೆಗಳನ್ನು ಅಭಿವೃದ್ಧಿ ಪಡಿಸಿದೆ.
13 ಹಣ್ಣುಗಳು, 26 ತರಕಾರಿಗಳು, 10 ವಿವಿಧ ಮಾದರಿ ಹೂಗಳು ಮತ್ತು 5 ಔಷಧಿ ಬೆಳೆಗಳನ್ನು ಅಭಿವೃದ್ಧಿ ಮಾಡಿದೆ. 302ಕ್ಕೂ ಅಧಿಕ ಪ್ರಭೇಧಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 32 ವಿವಿಧ ತಳಿಯ ಹಣ್ಣುಗಳು, 136 ತರಕಾರಿಗಳು, 115 ಹೂಗಳು, 13 ಔಷಧಿ ಬೆಳೆಗಳು ಸೇರಿವೆ. ಹಾಗೆಯೇ 163 ತೋಟಗಾರಿಕಾ ಉತ್ಪನ್ನಗಳಿಗೆ ಸಂಬಂಧಿಸಿದ ತಂತ್ರಜ್ಞಾನಗಳು, ಬೆಳೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಲಾಗಿದೆ. ಸಂಶೋಧನೆಯ ಜೊತೆಗೆ ಸಂಸ್ಧೆಯು ರಾಷ್ಟ್ರದ ಆರ್ಥಿಕತೆಗೆ 1300 ಕೋಟಿಗಳಿಗೂ ಅಧಿಕ ಕೊಡುಗೆ ನೀಡುತ್ತಿದೆ.
ಪ್ರತಿವರ್ಷದಂತೆ ಈ ಬಾರಿಯೂ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ-2021 ಅನ್ನು ಆಯೋಜನೆ ಮಾಡಲಾಗಿದೆ. 'ಸ್ಟಾರ್ಟ್ಅಪ್ ಮತ್ತು ಸ್ಟ್ಯಾಂಡ್ಅಪ್ ಭಾರತಕ್ಕಾಗಿ ತೋಟಗಾರಿಕೆ' ಎಂಬ ಘೋಷ ವಾಕ್ಯದೊಂದಿಗೆ ಮೇಳವನ್ನು ನಡೆಸಲಾಗುತ್ತಿದೆ. ಕೋವಿಡ್-19 ಹಿನ್ನೆಲೆ ಮೊದಲ ಬಾರಿಗೆ ಮೇಳವು ಭೌತಿಕ ಹಾಗೂ ಆನ್ಲೈನ್ ಮೂಲಕ ನಡೆಯಲಿದೆ.
ಇದನ್ನೂ ಓದಿ: ಮರಾಠಿ ಮಾತನಾಡದ ಚಾಲಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ
ಈ ಬಾರಿಯ ಮೇಳದಲ್ಲಿ ತೋಟಗಾರಿಕೆಯನ್ನು ಉದ್ಯಮವನ್ನಾಗಿ ಉತ್ತೇಜಿಸಲು ವಿಶೇಷ ಆಸಕ್ತಿವಹಿಸಲಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಠಿಯಿಂದಾಗಿ ಸಂಕಷ್ಟಕ್ಕೆ ಒಳಗಾಗುವ ರೈತನಿಗೆ ತೋಟಗಾರಿಕೆ ಒಂದು ಉದ್ಯಮವನ್ನಾಗಿ ತೆಗೆದುಕೊಳ್ಳುವಂತೆ ಸಲಹೆ ಮತ್ತು ಸಹಕಾರ ನೀಡಲಾಗುವುದು. ಸಂಸ್ಥೆಯ ವಿಜ್ಞಾನಿಗಳು ರೈತರಿಗೆ ನೆರವು ನೀಡಲಿದ್ದಾರೆ.
ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಎಲ್ಲಾ ರಾಜ್ಯಗಳ ಕೃಷಿ, ತೋಟಗಾರಿಕೆ, ಪಂಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳು. ಐಸಿಎಆರ್ ಸಂಶೋಧನಾ ಸಂಸ್ಧೆಗಳು, ಕೆವಿಕೆ ಸರ್ಕಾರೇತರ ಸಂಘ ಸಂಸ್ಧೆಗಳು, ಸ್ತ್ರೀಶಕ್ತಿ ಗುಂಪು, ಸ್ವಸಹಾಯ ಸಂಘ, ರೈತರ ಉತ್ಪಾದಕ ಸಂಘಗಳು, ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳು, ಕೃಷಿ ಪರಿಕರ, ರಸಗೊಬ್ಬರ ಹಾಗೂ ಸಸ್ಯ ಸಂರಕ್ಷಣಾ ವಸ್ತುಗಳ ತಯಾರಕರು, ಬಿತ್ತನೆ ಬೀಜಗಳು ಮತ್ತು ನರ್ಸರಿ ಗಿಡಗಳ ವಿತರಕರು, ನವೋದ್ಯಮಿಗಳು ಭಾಗವಹಿಸಲಿದ್ದಾರೆ.
ರಾಷ್ಚ್ರೀಯ ತೋಟಗಾರಿಕಾ ಮೇಳದ ವಿಶೇಷತೆ:
ಕಳೆದ 5 ದಶಕಗಳಲ್ಲಿನ ಐಐಎಚ್ಆರ್ ಸಂಸ್ಥೆಯ ಸಾಧನೆಗಳನ್ನು ಪ್ರದರ್ಶಿಸುವುದರ ಜೊತೆಗೆ ಹೆಚ್ಚಿನ ಇಳುವರಿ ನೀಡುವ ಪ್ರಭೇದಗಳು, ಕೀಟ ಮತ್ತು ರೋಗ ಸಹಿಷ್ಣು ಪ್ರಭೇದಗಳು, ಜೈವಿಕ ಕೀಟ ನಾಶಕಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಅಧಿಕ ಇಳುವರಿ ನೀಡುವ ಮಾವಿನ ಮಿಶ್ರತಳಿಗಳಾದ ಅರ್ಕಾ ಉದಯ ಮತ್ತು ಅರ್ಕಾ ಸುಭ್ರಭಾತ್, ಅಧಿಕ ಇಳುವರಿ ನೀಡುವ ಪೇರಲ ಮಿಶ್ರತಳಿಗಳಾದ ಅರ್ಕಾ ಕಿರಾನ್, ಅರ್ಕಾ ಅಪೇಕ್ಷಾ. ಸಂಸ್ಕರಣೆಗಾಗಿ ಹೆಚ್ಚಿನ ಇಳುವರಿ ನೀಡುವ ಟೊಮೊಟೊ ಹೈಬ್ರಿಡ್ ಅರ್ಕಾ ವಿಶೇಷ್. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಾದ ಅರ್ಕಾಹಲ ಸುರಸ್ ಪಾನೀಯ, ಅರ್ಕಾ ಚಾಕೋಲೆಟ್, ಅರ್ಕಾ ಜಾಕೀಸ್ (ಕುಕೀಸ್ ). ಅಣಬೆಯ ಮೌಲ್ಯವರ್ಧಿತ ಚಟ್ನಿ ಮತ್ತು ರಸಂ ಪುಡಿಗಳು ಈ ಬಾರಿಯ ವಿಶೇಷವಾಗಿದೆ.