ಬೆಂಗಳೂರು : ರೈಲು ಹಳಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಸಂಚಾರ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮೊದಲಿನಂತೆ ಸೇವೆ ಆರಂಭಿಸಿದೆ. ಈ ಕುರಿತು ಬಿ.ಎಂ.ಆರ್.ಸಿ.ಎಲ್ ಪ್ರಕಟಣೆ ಹೊರಡಿಸಿದೆ.
ರೈಲು ಹಳಿಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ಪೀಣ್ಯದಿಂದ ನಾಗಸಂದ್ರಕ್ಕೆ ಮೆಟ್ರೋ ಸಂಚಾರ ಸೇವೆಯಲ್ಲಿ ವ್ಯತಯ ಉಂಟಾಗಿತ್ತು. ಇದರಿಂದ ಯಶವಂತಪುರ - ಸಿಲ್ಕ್ ಇನ್ಸ್ಟಿಟ್ಯೂಟ್ ತನಕ ಮಾತ್ರ ಸಂಚಾರ ಇತ್ತು. ಬೆಳಗ್ಗೆ 10.18 ರಿಂದ 10.50 ರವರೆಗೆ ನಮ್ಮ ಮೆಟ್ರೋ ರೈಲು ಸ್ಥಗಿತಗೊಂಡಿತ್ತು. ಬಳಿಕ ರೈಲು ಹಳಿಯ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದ್ದು ಯಥಾಸ್ಥಿತಿಗೆ ಮರಳಿದೆ. ಈ ಹಿನ್ನೆಲೆ ಬೆಳಗ್ಗೆ 10.50 ರ ನಂತರ ಎಂದಿನಂತೆ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಿದೆ ಎಂದು ನಮ್ಮ ಮೆಟ್ರೊ ಸಂಸ್ಥೆ ತಿಳಿಸಿದೆ.
ಬೆಳಗ್ಗೆ ತಾಂತ್ರಿಕ ದೋಷದಿಂದ ಮೆಟ್ರೋ ಸಂಚಾರ ಬಂದ್ ಆಗಿದ್ದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸಬೇಕಾಯಿತು. ದುರಸ್ತಿ ಆಗುವವರೆಗೂ ಮೆಟ್ರೋ ಸಂಚಾರ ಇಲ್ಲದೇ ಕೆಲವರು ತೊಂದರೆಗೊಳಗಾದರು. ಕೆಲ ಪ್ರಯಾಣಿಕರು, ತಮ್ಮ ತಮ್ಮ ಸ್ಥಳಗಳನ್ನು ತಲುಪಲು ಬಸ್ಗಳ ಮೊರೆ ಹೋಗಿದ್ದರು.
ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ 'ಕೇಕ್ ಶೋ' ಆರಂಭ: ಸಂಸತ್ತಿನ ಸೊಬಗಿನಿಂದ ಹಿಡಿದು ಚಂದ್ರಯಾನ ಮಾದರಿ ಕೇಕ್ ಪ್ರದರ್ಶನ
ಹಿಂದಿನ ಘಟನೆ :- ರೀ-ರೈಲು ಹಳಿ ತಪ್ಪಿ ಆಕ್ರೋಶಗೊಂಡಿದ್ದ ಪ್ರಯಾಣಿಕರು : ಅಕ್ಟೋಬರ್ನಲ್ಲಿ ರೀ- ರೈಲು ಹಳಿ ತಪ್ಪಿ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲಿನ ಸಂಚಾರ ತಾತ್ಕಲಿಕವಾಗಿ ವ್ಯತ್ಯಯವಾಗಿತ್ತು. ಆದರೆ, ಅಂದು ಪ್ರಯಾಣಿಕರಿಗೆ ತಾಂತ್ರಿಕ ಅಡಚಣೆಯಿಂದಾಗಿ ಸುಗಮ ಸಂಚಾರದಲ್ಲಿ ವ್ಯತ್ಯಯ ಆಗಿರುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ಪರಿಣಾಮ ಈ ಬಗ್ಗೆ ಅರಿಯದ ಪ್ರಯಾಣಿಕರು ಯಶವಂತಪುರ ಮೆಟ್ರೋ ರೈಲು ನಿಲ್ದಾಣದಲ್ಲಿ ಗಂಟೆಗಟ್ಟಲೇ ಮೆಟ್ರೋಗಾಗಿ ಕಾದಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಪ್ರಯಾಣಿಕರು ಬಿಎಂಆರ್ಸಿಎಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪ್ರಯಾಣಿಕರು ಬಿಎಂಟಿಸಿ ಹಾಗೂ ಆಟೋ ಹತ್ತಿ ಕಚೇರಿಗಳಿಗೆ ತಲುಪಿದ್ದರು. ಈ ಹಿನ್ನೆಲೆ ಬಿಎಂಟಿಸಿ ಹೆಚ್ಚುವರಿ ಫೀಡರ್ ಬಸ್ಗಳ ಸೇವೆಯನ್ನು ಒದಗಿಸಿತ್ತು. ಇಲ್ಲಿ ಹಳಿ ತಪ್ಪಿದ್ದ ರೀ-ರೈಲನ್ನು ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಸ್ಥಳದಿಂದ ಲಿಫ್ಟ್ ಮಾಡಿದ್ದರು. ಕ್ರೇನ್ ಮೂಲಕ ಸಿಬ್ಬಂದಿ, ಇಂಜಿನಿಯರ್ಗಳು ರೀ ರೈಲನ್ನು ತೆರವುಗೊಳಿಸಿ ರಸ್ತೆಗಿಳಿಸಿದ್ದರು. ಇದಕ್ಕೂ ಮುನ್ನ ಒಂದು ಟ್ರ್ಯಾಕ್ನಲ್ಲಿ ಮಾತ್ರ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿದ್ದವು.